ಮುಂಬೈ : ಸಮುದ್ರ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಗೆ ಸಂಬಂಧಪಟ್ಟಂತೆ ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಇಂದು ಮತ್ತಿಬ್ಬರನ್ನು ಬಂಧಿಸಿದೆ.
ಶನಿವಾರ ಶಿಪ್ ನಲ್ಲಿ ನಡೆದ ಪಾರ್ಟಿಯ ಮೇಲೆ ದಾಳಿ ನಡೆಸಿದ್ದ ಎನ್ಸಿಬಿ ಭಾನುವಾರ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಒಂಭತ್ತು ಜನರನ್ನು ಬಂಧಿಸಿತ್ತು. ಬಂಧಿತರನ್ನು ಹೊರತು ಪಡಿಸಿ ಇನ್ನೂ ಕೆಲವರನ್ನು ಕೇವಲ ವಿಚಾರಣೆಗಾಗಿ ಅಧಿಕಾರಿಗಳು ಎನ್ಸಿಬಿ ಕಚೇರಿಗೆ ಕರೆತಂದಿತ್ತು. ಅವರಲ್ಲಿ ಒಂದಿಬ್ಬರು ನೀಡಿದ ಮಾಹಿತಿ ಮೇರೆಗೆ ಇಂದು ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರನ್ನೂ ಇಂದು ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರೆ ಇಬ್ಬರನ್ನು ಅಕ್ಟೋಬರ್ 7 ರವರೆಗೆ ಎನ್ ಸಿಬಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಇನ್ನು ವಿಚಾರಣೆ ವೇಳೆ ಆರ್ಯನ್ ಖಾನ್ ಅವರು, ತಾನು ನಾಲ್ಕು ವರ್ಷಗಳಿಂದಲೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೇನೆ. ಇದು ನನ್ನ ಅಪ್ಪ-ಅಮ್ಮನಿಗೂ ಗೊತ್ತು ಎಂದು ಒಪ್ಪಿಕೊಂಡಿದ್ದಾರೆ.










