ಚಿಕ್ಕಮಗಳೂರು : ಜಿಲ್ಲೆಯಲ್ಲಿ ಪಟಾಕಿ ಸಿಡಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸುವಂತೆ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ದೀಪಾವಳಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ರೂ. ಮೌಲ್ಯದ ಪಟಾಕಿ ಸಿಡಿಸುತ್ತಿರು ವುದರಿಂದ ಇಲ್ಲಿನ ಪರಿಸರ ಹಾಳಾಗುತ್ತಿದೆ. ವಾಯುಮಾಲಿನ್ಯ, ಶಬ್ದಮಾಲಿನ್ಯ ಉಂಟಾಗುತ್ತಿದೆ. ಇದರ ಜೊತೆಗೆ ಪಟಾಕಿ ಸಿಡಿಸುವ ವೇಳೆ ಹಲವಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಅನೇಕರು ಕಣ್ಣು, ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಪಟಾಕಿಗಳಲ್ಲಿ ಭಾರೀ ಪ್ರಮಾಣದ ರಾಸಾಯನಿಕ ಪದಾರ್ಥಗಳನ್ನು ಬಳಸುತ್ತಿದ್ದು ಅದು ಸವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ಪ್ರತಿ ವರ್ಷ ಇದೇ ರೀತಿ ಪಟಾಕಿ ಸಿಡಿಸುತ್ತಾ ಹೋದಲ್ಲಿ ಜಿಲ್ಲೆಯ ಹಸಿರು ಮತ್ತು ಸುಂದರ ಪರಿಸರ ನಾಶವಾಗುತ್ತದೆ. ಉಸಿರಾಡಲು ಶುದ್ದವಾದ ಆಮ್ಲಜನಕ ದೊರೆಯದಂತಾಗುತ್ತದೆ ಎಂದು ತಿಳಿಸಿದರು.
ಪಟಾಕಿಯನ್ನು ಜನವಸತಿ ಪ್ರದೇಶಗಳಲ್ಲಿ ದಾಸ್ತಾನು ಮಾಡಬಾರದು ಎಂಬ ಸರ್ಕಾರದ ಆದೇಶವಿದ್ದರೂ ಸಹ ಜಿಲ್ಲೆಯಲ್ಲಿ ಅದನ್ನು ಪಾಲಿಸುತ್ತಿಲ್ಲ. ಹಾಗಾಗಿ ಅವಘಡ ಸಂಭವಿಸುವ ಭೀತಿ ಎದುರಾಗಿದೆ ಎಂದ ಪದಾಧಿಕಾರಿಗಳು ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪಟಾಕಿ ದಾಸ್ತಾನು ಮಾಡುವುದು, ಸಿಡಿಸುವುದು ಮತ್ತು ಮಾರಾಟ ಮಾಡುವುದನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಬಿಎಸ್.ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧ, ಉಪಾಧ್ಯಕ್ಷೆ ಕೆ.ಎಸ್.ಮಂಜುಳ, ರೇಖ, ಹೆಚ್.ಕುಮಾರ್, ವಸಂತ, ನವೀನ್, ವಿನೀತ್, ಧನಂಜಯ, ಕೊಪ್ಪ ಆನಂದ್, ರೈತ ಸಂಘದ ಮುಖಂಡ ಕೆ.ಕೆ.ಕೃಷ್ಣೇಗೌಡ ಹಾಜರಿದ್ದರು.










