ಚಿಕ್ಕಮಗಳೂರು : ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸುವ ಮೂಲಕ ಮಹಿಳೆಯರು, ಶೋಷಿತರು ಮತ್ತು ಕೆಳವರ್ಗದವರೂ ಸಹ ಅಧಿಕಾರದ ಚುಕ್ಕಾಣಿಯನ್ನು ಹಿಡಿಯ ಬಹುದು ಎಂಬುದನ್ನು ತೋರಿಸಿಕೊಟ್ಟ ಮಹಾತ್ಮರು ಕಾನ್ಸಿರಾಮ್ ಸಾಹೇಬರು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.
ನಗರದ ಬಿಎಸ್ಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಪಕ್ಷದ ಸ್ಥಾಪಕ ಕಾನ್ಸಿರಾಮ್ ಅವರ 15ನೇ ಪರಿನಿಬ್ಬಾಣ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರು, ಶೋಷಿತರು ಮತ್ತು ಕೆಳವರ್ಗದವರಿಗೂ ಅಧಿಕಾರ ಹಿಡಿಯಲು ಅವಕಾಶವಿದೆ. ಅದಕ್ಕಾಗಿ ಆ ಜನ ಸಂಘಟಿತರಾಗುವುದು ಅತ್ಯಗತ್ಯವಾಗಿದೆ ಎಂಬುದನ್ನು ಮನಗಾಣಿಸುವ ನಿಟ್ಟಿನಲ್ಲಿ ಕಾನ್ಸಿರಾಮ್ ಅವರು ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿದರು ಎಂದರು.
ಶೋಷಿತರು, ಮಹಿಳೆಯರು ಮತ್ತು ಕೆಳವರ್ಗದವರು ಅಧಿಕಾರದ ಚುಕ್ಕಾಣಿ ಹಿಡಿದರೆ ಮಾತ್ರ ದೌರ್ಜನ್ಯ ಮತ್ತು ಶೋಷಣೆಯಿಂದ ಮುಕ್ತರಾಗಬಹುದು. ಸಮ ಸಮಾಜದ ನಿರ್ಮಾಣ ಮಾಡಬಹುದು ಎಂಬುದನ್ನು ಅರಿತಿದ್ದ ಕಾನ್ಸಿರಾಮ್ ಅವರು ಓಟಿನ ಮಹತ್ವ ತಿಳಿಸಲು ಸಾವಿರಾರು ಕಿ.ಮೀ.ನಷ್ಟು ದೂರ ಸೈಕಲ್‍ನಲ್ಲಿ ಸಂಚರಿಸಿ ಪಕ್ಷ ಕಟ್ಟಿದರು ಎಂದರು.
ಓಟು ನಮ್ಮದು, ಅಧಿಕಾರ ನಿಮ್ಮದು ಎಂಬುದು ನಿಲ್ಲಬೇಕು. ಮತವೂ ನಮ್ಮದು, ಅಧಿಕಾರವೂ ನಮ್ಮದು ಎಂಬ ಕಾಲ ಬರಬೇಕು ಎಂದು ಸದಾ ಹೇಳುತ್ತಿದ್ದ ಕಾನ್ಸಿರಾಮ್ ಅವರು ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ದೊರೆಯಲು ಸಾಕಷ್ಟು ಶ್ರಮ ಹಾಕಿದ್ದರು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಅಕ್ಕ ಮಯಾವತಿ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಮಹಿಳೆಯರೂ ಸಹ ಅಧಿಕಾರ ಮಾಡಬಲ್ಲರು ಎಂಬುದನ್ನು ಕಾನ್ಸಿರಾಮ್ ಅವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಪ್ರಧಾನ ಕಾರ್ಯದರ್ಶಿ ವಸಂತ, ಕೆ.ಎಸ್.ಮಂಜುಳಾ, ಸುಕನ್ಯ, ಹುಣಸೇಮಕ್ಕಿ ಲಕ್ಷ್ಮಣ್, ಗಿರೀಶ್, ಜಯಚಂದ್ರ, ಪುಷ್ಪ ಉಪಸ್ಥಿತರಿದ್ದರು.










