ಮೈಸೂರು : ಪುಟ್ಕೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಮೈತ್ರಿ ಸರ್ಕಾರವನ್ನು ಕೆಡವಿರುವ ಸಿದ್ದರಾಮಯ್ಯ ಕುತಂತ್ರಿ ರಾಜಕಾರಣಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವರಾತ್ರಿ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಕುಟುಂಬದ ಜೊತೆ ಬಂದು ನಾಡ ದೇವತೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ 23 ಸಚಿವರ ಹೊಟ್ಟೆ ಮೇಲೆ ಹೊಡೆದರು. ಮೈತ್ರಿ ಸರ್ಕಾರ ಪತನವಾಗಲು ಕಾರಣವೇ ಅವರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹಕಾರ ಕೊಟ್ಟವರು ಯಾರು? ಎಂಬುದು ಗೊತ್ತಿದೆ. ಅಧಿಕಾರಕ್ಕಾಗಿ ನೀವು ಎಷ್ಟೆಟ್ಟು ಕುತಂತ್ರ ಮಾಡುತ್ತೀರಾ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಜೆಡಿಎಸ್ ಬಗ್ಗೆ ಮಾತನಾಡಲು ಇವರು ಯಾರು ಎಂದು ಹೆಚ್‍ಡಿಕೆ ಪ್ರಶ್ನಿಸಿದರು.
ಸಿದ್ದರಾಮಯ್ಯ ಜೊತೆ ಯಡಿಯೂರಪ್ಪ ಗುಪ್ತವಾಗಿ ಮಾತನಾಡಿರುವ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಮಾಹಿತಿ ಸಿಕ್ಕಿದೆ. ಆದ್ದರಿಂದಲೇ ಬಿಎಸ್‌ವೈ ಆಪ್ತರ ಮೇಲೆ ಐಟಿ ದಾಳಿ ಆಗಿದೆ. ಐಟಿ ದಾಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಅವರು ಯಡಿಯೂರಪ್ಪರನ್ನು ಭೇಟಿ ಮಾಡಿರುವುದೇ ಐಟಿ ದಾಳಿಗೆ ಪ್ರಮುಖ ಕಾರಣ ಎಂದು ಆರೋಪಿಸಿದ್ದಾರೆ.










