ಜೈಪುರ : ರಾಜಸ್ಥಾನದ ಧೋಲ್ಪುರದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ಮಾಡುವ ವೇಳೆ ಐವರು ಪಾರ್ವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರೆಲ್ಲರೂ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಭಾವನಪುರ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ನವರಾತ್ರಿ ಹಿನ್ನೆಲೆಯಲ್ಲಿ ನಿನ್ನೆ ದುರ್ಗಾ ಮೂರ್ತಿಯನ್ನು ವಿಸರ್ಜನೆ ಮಾಡಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಸುಮಾರು 12ಕ್ಕೂ ಹೆಚ್ಚು ಯುವಕರು ದುರ್ಗಾ ಮೂರ್ತಿಯನ್ನು ಹಿಡಿದುಕೊಂಡು ಪಾರ್ವತಿ ನದಿ ನೀರಿನಲ್ಲಿ ಇಳಿದಿದ್ದರು. ಆದರೆ, ನದಿಯೊಳಗಿನ ನೀರು ಹೆಚ್ಚಾಗಿ, ಬಲವಾದ ಪ್ರವಾಹವಿದ್ದುದರಿಂದ ಐವರು ಯುವಕರು ಮುಳುಗಿದ್ದಾರೆ.
ಈಗಾಗಲೇ ಶೋಧ ಕಾರ್ಯಾಚರಣೆ ನಡೆಸಿ ಐವರ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ.










