ನವದೆಹಲಿ : ಕೋವಿಡ್ ವ್ಯಾಕ್ಸಿನ್ ನೀಡುವ ಕಾರ್ಯ ಭರದಿಂದ ಸಾಗುತ್ತಿದ್ದು, ಇಂದು 100 ಕೋಟಿ ಲಸಿಕೆ ವಿತರಿಸಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ.
ಜನವರಿ 16ರಂದು ಮೊದಲ ವ್ಯಾಕ್ಸಿನ್ ನೀಡಲಾಗಿತ್ತು. ದೇಶದ ಶೇ. 50ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ಸಿಕ್ಕಿದರೆ ಶೇ.21ರಷ್ಟು ಮಂದಿಗೆ ಎರಡನೇ ಡೋಸ್ ಪೂರ್ಣವಾಗಿದೆ. ಈ ಮೂಲಕ 9 ತಿಂಗಳಲ್ಲಿ 100 ಕೋಟಿ ಡೋಸ್ ನೀಡಿದ ಗರಿಮೆಗೆ ಭಾರತ ಪಾತ್ರವಾಗಿದೆ. ಲಸಿಕೆ ವಿತರಿಸಲು ಕೇಂದ್ರ ಸರ್ಕಾರ 35 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ.
ಉತ್ತರ ಪ್ರದೇಶದಲ್ಲಿ 12.08 ಕೋಟಿ, ಮಹಾರಾಷ್ಟ್ರದಲ್ಲಿ 9.23 ಕೋಟಿ, ಪಶ್ಚಿಮ ಬಂಗಾಳದಲ್ಲಿ 6.82 ಕೋಟಿ, ಗುಜರಾತ್ ನಲ್ಲಿ 6.73 ಕೋಟಿ, ಕರ್ನಾಟಕದಲ್ಲಿ 6.13 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವದ ಪ್ರತಿಫಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ.










