ಹಣ, ಹೆಂಡ, ಪ್ರಭಾವ ಬಳಸಿ ವೋಟು ಕೇಳುವ ಕಾಲ ಹೋಗಿದೆ : ಬಿ.ಎಸ್.ಯಡಿಯೂರಪ್ಪ.

69
firstsuddi

ಹಾವೇರಿ : ಹಣ, ಹೆಂಡ, ಪ್ರಭಾವ ಬಳಸಿ ವೋಟು ಕೇಳುವ ಕಾಲ ಹೋಗಿದೆ. ಜನ ಈಗ ಬುದ್ಧಿವಂತರಾಗಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಾಂಗ್ರೆಸ್ ಕಾಲೆಳೆದಿದ್ದಾರೆ.

ಹಾನಗಲ್ ಉಪಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ ಅವರು, ದೇಶದ ಅಲ್ಲಿ ಇಲ್ಲಿ ಯಂಕ-ನಾಣಿ-ಸೀನ ಅಂತ ಕೆಲವು ಕಾಂಗ್ರೆಸ್ ಎಂಪಿಗಳಿದ್ದಾರೆ ಅಷ್ಟೇ. ಕಾಂಗ್ರೆಸ್ ನವ್ರ ಬುಡಬುಡಿಕೆ ಮಾತುಗಳಿಗೆ ಜನ ಬೆಲೆ ಕೊಡಲ್ಲ. ಕಾಂಗ್ರೆಸ್ ರಾಜಕೀಯ ದೊಂಬರಾಟ ಮಾಡಿ ಜನರ ಮನಸು ಗೆಲ್ಲಕ್ಕಾಗಲ್ಲ. ನಮ್ಮ ಪ್ರಚಾರದ ವೇಳೆ ಕಾಂಗ್ರೆಸ್ ನವರ ಹೆಸರು ಹೇಳುವ ಅಗತ್ಯ ಇಲ್ಲ. ನಾವು ದೊಡ್ಡ ಅಂತರದಲ್ಲಿ ಗೆದ್ದಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸಬೇಕಿದೆ. ಚುನಾವಣೆ ಬಳಿಕ ವಿಜಯೋತ್ಸವ ಆಚರಿಸೋಣ ಎಂದು ತಿಳಿಸಿದರು.

ನನಗೆ ಯಾರೂ ಒತ್ತಾಯ ಮಾಡಲಿಲ್ಲ. ನಾನೇ ಸ್ವತ: ರಾಜೀನಾಮೆ ಕೊಟ್ಟೆ. ನನಗೆ ಅಧಿಕಾರ ಮುಖ್ಯ ಅಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ಬಿಸಾಕಿದೆ. ನನಗೆ ಅಧಿಕಾರ ಇಲ್ಲದಿದ್ರೂ ಜನ ಪ್ರೀತಿ, ಬೆಂಬಲ ತೋರಿಸ್ತಾರೆ. ಬಿಜೆಪಿ ಸ್ವಂತ ಬಲದಿಂದ ಅಧಿಕಾರ ಹಿಡಿಯುವಂತೆ ಮಾಡುವುದು ನನ್ನ ಸಂಕಲ್ಪ. ನವೆಂಬರ್ 15 ರ ಬಳಿಕ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.