ಕಲಬುರಗಿ : ಬಿಟ್ ಕಾಯಿನ್ ಹಗರಣ ಕರ್ನಾಟಕದ ಮುಖ್ಯಮಂತ್ರಿಯನ್ನು ಬಲಿ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣ ನಡೆದಿರುವುದು ಬಿಜೆಪಿ ಸರ್ಕಾರದಲ್ಲಿ, ಬಿಜೆಪಿ ನಾಯಕರು ಲಂಚ ತೆಗೆದುಕೊಂಡಿರುವುದು ಬಿಟ್ ಕಾಯಿನ್ ಗಳ ಮೂಲಕ, ಸರ್ಕಾರದ ಕೆಲಸ ಮಾಡಿಕೊಡಲು ಕ್ರಿಪ್ಟೊ ಕರೆನ್ಸಿಗಳನ್ನು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಈ ಬಗ್ಗೆ ಸಮಗ್ರ ತನಿಖೆಯಾದರೆ ಈ ಸರ್ಕಾರ ಬಿದ್ದು ಹೋಗಿ ಬಸವರಾಜ ಬೊಮ್ಮಾಯಿಯವರ ಸಿಎಂ ಪದವಿ ಹೋಗುವುದು ಖಂಡಿತ ಎಂದು ಹೇಳಿದ್ದಾರೆ.
ಪ್ರಕರಣದ ಆರೋಪಿ ಶ್ರೀಕಿ ಭಟ್ ನನ್ನು ಒಮ್ಮೆ ಬಂಧಿಸಿ ಮತ್ತೊಮ್ಮೆ ಬಿಡುಗಡೆ ಮಾಡಿಸಿ ನಂತರ ಸಿಐಡಿ ತನಿಖೆ ಹೀಗೆ ನಾಟಕವಾಡುತ್ತಿದ್ದಾರೆ. ಹಗರಣದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗಪಡಿಸಲಿ, ಬೇರೆ ಪಕ್ಷದವರು ಭಾಗಿಯಾಗಿದ್ದರೆ ತನಿಖೆ ಮಾಡಲಿ ಗೊತ್ತಾಗುತ್ತದೆ. ಕೇವಲ ಬಾಯಿ ಮಾತಲ್ಲೇ ತನಿಖೆಗೆ ಆದೇಶ ಮಾಡಿದ್ದೇವೆ ಎಂದು ಹೇಳುತ್ತಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.










