ಶಿವಮೊಗ್ಗ : ಜಿಲ್ಲೆಯ ಸಕ್ಕರೆಬೈಲು ಆನೆ ಬಿಡಾರದ ಗಂಡು ಮರಿ ಆನೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಎಂಬ ಹೆಸರು ನಾಮಕರಣ ಮಾಡಲಾಗಿದೆ.
ಕಳೆದೆರೆಡು ತಿಂಗಳ ಹಿಂದೆಯಷ್ಟೇ ಪುನೀತ್ ಅವರು ವನ್ಯಜೀವಿ ರಕ್ಷಣೆಗೋಸ್ಕರ ಮತ್ತು ಅರಣ್ಯ ಸಂರಕ್ಷಣೆ ಕುರಿತ ಸಾಕ್ಷ್ಯ ಚಿತ್ರೀಕರಣಕ್ಕಾಗಿ ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿದ್ದರು. ಈ ವೇಳೆ ನೇತ್ರ ಎಂಬ ಹೆಣ್ಣಾನೆ ಮತ್ತು ಅದರ ಮರಿಯಾನೆಯನ್ನು ಕ್ರಾಲ್ ನಲ್ಲಿ ಕಂಡಿದ್ದ ಪುನೀತ್ ತಾಯಿ ಮಗುವಿನ ಬಗ್ಗೆ ಮಾವುತರಿಂದ ವನ್ಯಜೀವಿ ವೈದ್ಯರಿಂದ ಈ ಸಂಬಂಧ ಮಾಹಿತಿ ಪಡೆದಿದ್ದರು. ಬಿಡಾರದ ನೇತ್ರ ಆನೆ ಜನ್ಮವಿತ್ತ ಗಂಡು ಮರಿಯಾನೆ ಇದಾಗಿದ್ದು, ಕೆಲ ಸಮಯ ಈ ಮರಿ ಗಜನ ಬಳಿ ಆಟವಾಡಿ, ಮುದ್ದಾಡಿದ್ದರು. ಈ ಮರಿ ಗಜಕ್ಕೆ ಪವರ್ ಸ್ಟಾರ್ ಹೆಸರು ಇಡಬೇಕು ಎಂಬುದು ಮಾವುತರು, ಕಾವಾಡಿಗಳು, ಪ್ರವಾಸಿಗರ ಆಸೆಯಾಗಿದೆ. ಹೀಗಾಗಿಯೇ ಅರಣ್ಯಾಧಿಕಾರಿಗಳು ಸಕ್ಕರೆಬೈಲು ಆನೆ ಬಿಡಾರದ ಮರಿಯಾನೆಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡಿದ್ದು, ಈ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಅಗಲಿದ ಪವರ್ ಸ್ಟಾರ್ ಗೆ ಗೌರವ ಸೂಚಿಸಿದ್ದಾರೆ.










