ಲಕ್ನೋ : 10 ತಿಂಗಳ ಹಸುಗೂಸಿನ ಮೇಲೆ ಮನೆ ಕೆಲಸದವನು ಅತ್ಯಾಚಾರವೆಸಗಿರುವ ಘಟನೆ ಸಾದಾತ್ ಗಂಜ್ ನಲ್ಲಿ ಭಾನುವಾರ ನಡೆದಿದೆ.
ಶಿಶುವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಪೀಡಿಯಾಟ್ರಿಕ್ ಸರ್ಜರಿ ವಿಭಾಗಕ್ಕೆ ದಾಖಲಿಸಲಾಗಿದೆ. ಮಗುವಿನ ಗುಪ್ತಾಂಗ, ಜನನಾಂಗಗಳಿಗೆ ಹಾನಿ ಮಾಡಿದ್ದರಿಂದ ಮಗು ತೀವ್ರವಾಗಿ ಗಾಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮನೆಯಲ್ಲಿ ಕೆಲಸ ಮಾಡುತ್ತಿದ್ದ 18 ವರ್ಷದ ಸನ್ನಿ ಕುಮಾರ್ ಎಂಬಾತ ಆ ಮನೆಯಲ್ಲಿದ್ದ 10 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಆ ಮಗುವಿನ ತಾಯಿ ತನ್ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬೆಡ್ ರೂಂನಲ್ಲಿ ಮಗು ಅಳುತ್ತಿರುವುದನ್ನು ಕೇಳಿ ರೂಮಿನೊಳಗೆ ಹೋಗಿ ನೋಡಿದಳು. ಆಗ ಆ ಬೆಡ್ ರೂಮಿನಲ್ಲಿ ಸನ್ನಿ ಕುಮಾರ್ ಬಟ್ಟೆಯನ್ನು ಅರೆಬರೆ ಬಿಚ್ಚಿಕೊಂಡು ನಿಂತಿದ್ದ. ಇದನ್ನು ನೋಡಿ ಆತಂಕಗೊಂಡ ಆಕೆ ಅವನನ್ನು ಹಿಡಿಯಲು ನೋಡಿದಳು. ಆದರೆ, ಆತ ಅಲ್ಲಿಂದ ಪರಾರಿಯಾದ. ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಯೋನಿಯಲ್ಲಿ ರಕ್ತ ಸುರಿಯುತ್ತಿತ್ತು. ಇದನ್ನು ನೋಡಿದ ಆಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬುದು ಗೊತ್ತಾಗಿದೆ.
ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಆರೋಪಿಯನ್ನು ಸೋಮವಾರ ಬಂಧಿಸಲಾಗಿದ್ದು, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.










