ನವದೆಹಲಿ : ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವು ಜನವರಿಯಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಎರಡು ವಾರಗಳಲ್ಲಿ ರೋಗ ಪ್ರತಿರೋಧಕ ಶಕ್ತಿಯ ಕುರಿತ ಸರ್ಕಾರದ ಉನ್ನತ ಸಲಹಾ ಗುಂಪಿನ ಸಭೆ ನಡೆಯಲಿದ್ದು, ಅದರಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವುದೂ ಸೇರಿದಂತೆ ಹಲವು ಅಂಶಗಳು ಚರ್ಚೆಯಾಗಲಿವೆ. ಇದರೊಂದಿಗೆ ವಯಸ್ಕರಿಗೆ ಕೊವಿಡ್-19 ಬೂಸ್ಟರ್ ಲಸಿಕೆ ನೀಡಲು ರೋಗ ನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಸಮಗ್ರ ಯೋಜನೆಯನ್ನು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಲಸಿಕೆಯನ್ನು ಈಗಾಗಲೇ 2-18 ವರ್ಷ ವಯಸ್ಸಿನ ಮಕ್ಕಳಿಗೆ ಬಳಸಲು ಶಿಫಾರಸ್ಸು ಮಾಡಲಾಗಿದೆ. ಆದರೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿ ಕೋವಾಕ್ಸಿನ್ ಲಸಿಕೆಯನ್ನು 2-18 ವರ್ಷ ವಯಸ್ಸಿನ ಮಕ್ಕಳಿಗೆ ಅನುಮೋದಿಸಿದ ನಂತರವೇ ಸರ್ಕಾರವು ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.










