ಚಿಕ್ಕಮಗಳೂರು : ದೇವಸ್ಥಾನಗಳ ಹುಂಡಿಯ 100 ರೂ. ಮುಖ ಬೆಲೆಯ ಲಕ್ಷಗಟ್ಟಲೆ ನೋಟುಗಳ ಬದಲಾಗಿ 500 ಹಾಗೂ 2000 ಮುಖ ಬೆಲೆಯ ನೋಟುಗಳನ್ನು ಕೊಡುವವರಿಗೆ ಶೇ.30ರಷ್ಟು ಕಮಿಷನ್ ನೀಡುವುದಾಗಿ ಮಹಿಳೆಯೊಬ್ಬರಿಂದ 10 ಲಕ್ಷ ಪಡೆದು ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಂಚಕರನ್ನು ಜಿಲ್ಲೆಯ ಕಡೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮಲ್ಲಿ ಕೆಲವರಿಗೆ ಪರಿಚಿತರಾಗಿರುವ ತಿಂಗಳಾಡಿಯ ಕೊರಗಪ್ಪ ಪೂಜಾರಿ ಎಂಬವರನ್ನು ಸಂಪರ್ಕಿಸಿದ್ದ ಆರೋಪಿಗಳು ಕಮಿಷನ್ ಹಣದ ವಿಷಯ ಪ್ರಸ್ತಾಪಿಸಿ ಈ ವಿಚಾರವನ್ನು ಬೇರೆಯವರಿಗೂ ತಿಳಿಸಲು ಹೇಳಿದ್ದರು. ಅದರಂತೆ ಕೊರಗಪ್ಪ ಅವರು ತಮಗೆ ಪರಿಚಯದ ಉಜಿರೆಯ ಕೃಪಾ ಅವರಿಗೆ ವಿಷಯ ತಿಳಿಸಿದ್ದರು.
ಕಮಿಷನ್ ಆಸೆಯಿಂದ ಕೃಪಾ ಅವರು ತಮ್ಮ ಸ್ನೇಹಿತರಾದ ಭುವನೇಂದ್ರ ಮತ್ತು ಜನಾರ್ದನ ಎಂಬವರೊಂದಿಗೆ 500-2000 ಮುಖಬೆಲೆಯ 10 ಲಕ್ಷ ಹಣದೊಂದಿಗೆ ಕಡೂರು ಪಟ್ಟಣದ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದ ಬಳಿ ಬಂದಿದ್ದರು. ಆಗ ಅಲ್ಲಿಗೆ ಬಂದ ಖಾವಿ ತೊಟ್ಟಿದ್ದ ನಕಲಿ ಸನ್ಯಾಸಿ ಮಹೇಶ್ ಎಂಬುವರು ಇದರಲ್ಲಿ ರೂ.13 ಲಕ್ಷ ರೂ. ಇದೆ, ಮತ್ತೆ ಎಣಿಸಿಕೊಳ್ಳಿ ಎಂದು ಹೇಳಿ, ನೋಟುಗಳಿಂದ ತುಂಬಿದಂತಿದ್ದ ಬ್ಯಾಗೊಂದನ್ನು ಕೃಪಾ ಅವರಿಗೆ ನೀಡಿ ಅಲ್ಲಿಂದ ಪರಾರಿಯಾಗಿದ್ದರು.
ಬಳಿಕ ಕೃಪಾ ಹಾಗೂ ಜೊತೆಗಿದ್ದ ಭುವನೇಂದ್ರ ಮತ್ತು ಜನಾರ್ದನ ಅವರು, ಆರೋಪಿಗಳು ನೀಡಿದ್ದ ಬ್ಯಾಗ್ ನ್ನು ತೆರೆದು ನೋಡಿದಾಗ ಅದರಲ್ಲಿ ಅದರಲ್ಲಿ ಪ್ರತಿಯೊಂದು ಕಂತೆಯ ಮೇಲೆ ಮಾತ್ರ 100 ರೂಪಾಯಿ ನೋಟು ಇದ್ದು, ಉಳಿದದ್ದೆಲ್ಲಾ ವೈಟ್ ಪೇಪರ್ ಇತ್ತು. ಕಮಿಷನ್ ನ ಆಸೆಯಿಂದಾಗಿ ತಾವು ಮೋಸ ಹೋಗಿರುವುದು ಅವರ ಅರಿವಿಗೆ ಬಂದಿದೆ. ಕೂಡಲೇ ಕೃಪಾ ಅವರು ಆರೋಪಿಗಳಿಗೆ ಕರೆ ಮಾಡಿದರು. ಆದರೆ ಅವರೆಲ್ಲರ ಮೊಬೈಲ್ ಗಳು ಸ್ವಿಚ್ಡ್ ಆಫ್ ಆಗಿದ್ದವು. ವಂಚನೆಗೊಳಗಾದ ಕೃಪಾ ಅವರು ನ.18ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಕಡೂರು ಪೊಲೀಸರು 48 ಗಂಟೆಯೊಳಗೆ ಕಳ್ಳ ಖಾವಿ ಸ್ವಾಮೀಜಿ ಮಹೇಶ್ ಸೇರಿದಂತೆ ಆರು ಜನರಲ್ಲಿ ಐವರನ್ನು ಬಂಧಿಸಿದ್ದು, ಬಂಧಿತರಿಂದ 5.10 ಲಕ್ಷ ನಗದು, ಒಂದು ಓಮಿನಿ ಕಾರು, 1 ಸ್ಕೂಟಿ ಹಾಗೂ 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೂ ಈ ನಕಲಿ ಸ್ವಾಮೀಜಿಯ ಗುಂಪನ್ನು ಪತ್ತೆ ಹಚ್ಚುವಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್, ಪಿಎಸ್ ಐ ಎನ್.ಕೆ.ರಮ್ಯ, ಪ್ರೊಬೇಷನ್ ಪಿಎಸೈ ಆದರ್ಶ್, ನವೀನ್, ಎ.ಎಸ್.ಐ. ವೇದಮೂರ್ತಿ ಸಿಬ್ಬಂದಿ ಕೃಷ್ಣಮೂರ್ತಿ, ಉಮೇಶ್, ರಾಜಪ್ಪ, ಮಧುಕುಮಾರ್, ಓಂಕಾರ್ ಮತ್ತು ಶಿವರಾಜ್ ಅವರನ್ನು ಎಸ್ ಪಿ ಅಕ್ಷಯ್ ಶ್ಲಾಘಿಸಿದ್ದಾರೆ.










