ಚಿಕ್ಕಮಗಳೂರು : 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಗರದ ಮಲ್ಲಂದೂರು ರಸ್ತೆಯ ಭಗತ್ಸಿಂಗ್ ಆಟೋ ನಿಲ್ದಾಣದ ವತಿಯಿಂದ ನಿನ್ನೆ ಅದ್ದೂರಿಯಿಂದ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಭಗತ್ಸಿಂಗ್ ಆಟೋ ನಿಲ್ದಾಣ ಸಂಘದ ಅಧ್ಯಕ್ಷ ವಾಜೀದ್ ನೆರವೇರಿಸಿದರು. ನಂತರ ಮಾತನಾಡಿದ ಅವರು ಕಲೆ, ಸಾಹಿತ್ಯ, ಸಂಸ್ಕøತಿಯ ತವರೂರಾದ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಮತ್ತು ನಾಡನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಕನ್ನಡ ಭಾಷೆ ಅತ್ಯಂತ ಶ್ರೀಮಂತ ಹಾಗೂ ಸಮೃದ್ದ ಭಾಷೆ, ಇಂತಹ ಪವಿತ್ರ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರಾದ ನಾವುಗಳು ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ಅಲ್ಲದೆ ಕನ್ನಡ ರಾಜ್ಯೋತ್ಸವದಂದು ವರ್ಷಪೂರ್ತಿ ಹಬ್ಬದ ರೀತಿ ಆಚರಿಸಬೇಕು ಎಂದು ಹೇಳಿದರು.
ಗೌರವಾಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬ ಕನ್ನಡಿಗನೂ ಸಹ ನಿತ್ಯ ಕನ್ನಡ ದಿನಪತ್ರಿಕೆ, ಕಾದಂಬರಿ ಮತ್ತು ಕಾವ್ಯಗಳನ್ನು ಓದುವ ಮೂಲಕ ಮನಸ್ಸಿನಿಂದಲೇ ಕನ್ನಡವನ್ನು ಬಳೆಸುವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಸನ್ನ, ಸದಸ್ಯರಾದ ಸತೀಶ್, ಶಿವಕುಮಾರ್, ಅಕ್ರಂ, ಸಿದ್ದೇಶ್, ಮಹೇಶ್, ಎಸ್.ಮೋಹನ್, ಇನಾಯತ್ ಹಾಗೂ ಭಗತ್ಸಿಂಗ್ ಆಟೋ ನಿಲ್ದಾಣದ ಎಲ್ಲಾ ಆಟೋ ಚಾಲಕರು ಮತ್ತು ಮಾಲೀಕರು ಉಪಸ್ಥಿತರಿದ್ದರು.










