ದೇವೇಗೌಡರ ಕೈ ಹಿಡಿದುಕೊಂಡು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ.

76
firstsuddi

ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಮಧ್ಯೆ ಇಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರ ಕೈ ಹಿಡಿದು, ಕುರ್ಚಿಯಲ್ಲಿ ಕೂರಿಸಿ ಕೆಲಹೊತ್ತು ಮಾತುಕತೆ ನಡೆಸಿದರು. ಇದರ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ಸಂಸತ್ನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಇಂದು ಭೇಟಿಯಾಗಿ ಬಹಳ ಸಂತೋಷವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ.ದೇವೇಗೌಡರು, ಇದುವರೆಗೆ ನಾಲ್ಕೈದು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದೇನೆ. ಇದುವರೆಗೂ ನನ್ನ ಬಗ್ಗೆ ಮೋದಿಯವರು ಅಗೌರವವಾಗಿ ಮಾತನಾಡಿಲ್ಲ. ನಾನು ಅವರೆದುರು ಹೋದಾಗ ಯಾವುದೇ ಸಿಟ್ಟು, ರೋಷವನ್ನೂ ನನ್ನೆದುರು ತೋರಲಿಲ್ಲ. ತುಂಬ ಪ್ರೀತಿಯಿಂದ ಮಾತನಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹಾಸನದಲ್ಲಿ ಐಐಟಿ ಸ್ಥಾಪನೆ ಮಾಡುವ ಬಗ್ಗೆ ಈ ಹಿಂದೆ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದೆ. ಆದರೆ ಸ್ಥಾಪನೆ ಸಾಧ್ಯವಿಲ್ಲ ಎಂದು ಅವರು ನನಗೆ ಮರುಪತ್ರ ಬರೆದಿದ್ದರು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ನೇರವಾಗಿಯೇ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.