ವಾಷಿಂಗ್ಟನ್ : ಅಮೆರಿಕಾದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ವ್ಯಕ್ತಿಯಲ್ಲಿ ಒಮಿಕ್ರೋನ್ ಪತ್ತೆಯಾಗಿದೆ ಎಂದು ಅಮೆರಿಕಾ ದೃಢಪಡಿಸಿದೆ.
ಕ್ಯಾಲಿಫೋರ್ನಿಯಾದಲ್ಲಿರುವ ವ್ಯಕ್ತಿಯಲ್ಲಿ ಹೊಸ ರೂಪಾಂತರಿ ಕಂಡುಬಂದಿದೆ. ಸೋಂಕಿತ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಯುಎಸ್ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಆಂಥೋನಿ ಪೌಸಿ ಮಾಹಿತಿ ನೀಡಿದ್ದಾರೆ.
ಸೋಂಕಿತ ವ್ಯಕ್ತಿ ನವೆಂಬರ್ 22 ರಂದು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದು, ಈತನಿಗೆ ಕೊಂಚ ಸೋಂಕಿನ ರೋಗಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ಸೋಮವಾರ ಕೋವಿಡ್-19 ಪರೀಕ್ಷೆಗೆ ವ್ಯಕ್ತಿ ಒಳಗಾಗಿದ್ದಾರೆ. ಈ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಇವರ ಸಂಪರ್ಕಿತರ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಅಮೆರಿಕಾದಲ್ಲಿ ಒಮಿಕ್ರೋನ್ ಕಂಡುಬಂದ ಬೆನ್ನಲ್ಲೆ ಶ್ವೇತ ಭವನ ಪ್ರಕಟಣೆ ಹೊರಡಿಸಿದ್ದು, ದೇಶವಾಸಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದೆ.










