ಸೂರಜ್ ರೇವಣ್ಣ ನಾಮಪತ್ರ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ…

67
firstsuddi

ಬೆಂಗಳೂರು : ಹಾಸನ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಡಾ. ಸೂರಜ್ ರೇವಣ್ಣ ಅವರ ನಾಮಪತ್ರ ತಿರಸ್ಕರಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಸೂರಜ್ ರೇವಣ್ಣ ತಮ್ಮ ಅಫಿಡವಿಟ್ನಲ್ಲಿ ವೈವಾಹಿಕ ವಿವರದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ, ಚನ್ನರಾಯಪಟ್ಟಣ ತಾಲೂಕು, ಕುಂದೂರು ಗ್ರಾಮದ ನಿವಾಸಿ ಕೆ.ಎಲ್ ಹರೀಶ್ ಅವರು, ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಏಕಸಸದಸ್ಯ ಪೀಠ, ಕೆಲ ಕಾಲ ವಾದ ಆಲಿಸಿ ಈಗಾಗಲೇ ಚುನಾವಣೆ ಆರಂಭವಾಗಿರುವುದರಿಂದ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿದಾರರಿಗೆ ಆಕ್ಷೇಪಣೆಗಳಿದ್ದರೆ ಚುನಾವಣೆ ಬಳಿಕ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಅರ್ಜಿದಾರರ ಆರೋಪವೇನು?
ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದ ಅರ್ಜಿಯಲ್ಲಿ ಪತ್ನಿಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಿಲ್ಲ. ಪತ್ನಿಗೆ ಸಂಬಂಧಿಸಿದ ಎಲ್ಲ ಕಾಲಂಗಳಲ್ಲಿ ‘ಅನ್ವಯವಾಗುವುದಿಲ್ಲ’ ಎಂದು ನಮೂದಿಸಿದ್ದಾರೆ. ಅಲ್ಲದೇ ಸೂರಜ್ ರೇವಣ್ಣ ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಆದ್ದರಿಂದ, ಸೂರಜ್ ನಾಮಪತ್ರವನ್ನು ಅಂಗೀಕರಿಸಿರುವ ಜಿಲ್ಲಾ ಚುನಾವಣಾಧಿಕಾರಿ ಆದೇಶವನ್ನು ರದ್ದುಪಡಿಸಬೇಕು. ಈ ಸಂಬಂಧ ಅರ್ಜಿದಾರರು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು. ಹಾಗೆಯೇ, ಸೂರಜ್ ರೇವಣ್ಣ ಅವರ ಉಮೇದುವಾರಿಕೆಯನ್ನು ಅನರ್ಹ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಿದ್ದರು.