ಕೇರಳದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ : ಸಚಿವ ಜೆ.ಸಿ.ಮಾಧುಸ್ವಾಮಿ.

59
firstsuddi

ತುಮಕೂರು : ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಕೇರಳದಿಂದ ಜಿಲ್ಲೆಗೆ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಕೇರಳದಿಂದ ಬಂದವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದರೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸೂಚಿಸಲಾಗಿದೆ. ಪ್ರತಿ ತಾಲೂಕಾಸ್ಪತ್ರೆಯಲ್ಲೂ 500-600 ಆಕ್ಸಿಜನ್ ಸಾಂದ್ರಕಗಳಿವೆ. ಜೊತೆಗೆ ಪ್ರತಿ ತಾಲೂಕಿನಲ್ಲಿ 5-6 ಐಸಿಯು ಬೆಡ್ ಇದೆ. ಈ ಬಾರಿ ಮಕ್ಕಳ ಪ್ರಕರಣ ಹೆಚ್ಚು ಕಂಡುಬರುವ ಸಾಧ್ಯತೆ ಇದೆ. ಹಾಗಾಗಿ 200 ಮಕ್ಕಳ ವೈದ್ಯರನ್ನು ಕರೆಸಿ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಚರ್ಚೆ ಮಾಡಲಾಗಿದೆ. ಐಸಿಯು ಬೆಡ್ ಸೇರಿದಂತೆ ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಡಿ. 9 ರಂದು ಸಚಿವ ಸಂಪುಟ ತುರ್ತು ಸಭೆ ನಡೆಸಲಾಗುವುದು ಎಂದರು.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ತುಮಕೂರಿನಲ್ಲಿ ಮೈತ್ರಿ ಇಲ್ಲ. ಬಿಜೆಪಿ -ಜೆಡಿಎಸ್ ಎರಡೂ ಕಡೆಯ ಅಭ್ಯರ್ಥಿಗಳು ಆಳವಾಗಿ ಪ್ರಚಾರ ಮಾಡಿದ್ದಾರೆ. ಇದರಿಂದಾಗಿ ತುಮಕೂರು ಮೈತ್ರಿ ಚರ್ಚೆಯಾಗಿಲ್ಲ. ಆದರೂ ವರಿಷ್ಠರು ಚರ್ಚೆ ಮಾಡಿದರೆ ಅದು ಅವರಿಗೆ ಬಿಟ್ಟ ತೀರ್ಮಾನ ಎಂದರು.