ಬೆಳಗಾವಿ : 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ದದಲ್ಲಿ ಜಯಸಾಧಿಸಿ 50 ವರ್ಷ ಪೂರೈಸಿದ ಸಂದರ್ಭ ಭಾರತ ಇಂದು ವಿಜಯ ದಿವಸ್ ಆಚರಿಸುತ್ತಿದ್ದು, ಬೆಳಗಾವಿಯ ಮರಾಠಿ ಲಘು ಪದಾತಿ ದಳ ಕೇಂದ್ರ (ಎಂಎಲ್ಐಆರ್ಸಿ)ಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜಯ ದಿವಸ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇನೆ ದೇಶ ರಕ್ಷಣೆಯ ಜತೆಗೆ ಆಂತರಿಕ ಭದ್ರತೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಇಂಡೋ-ಪಾಕ್ ಯುದ್ಧವು ದೇಶದ ಮೂರೂ ಸೇನಾ ಪಡೆಗಳ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಈ ಯುದ್ಧದ ಬಳಿಕ ಭಾರತ ಸೇನೆ ಮತ್ತಷ್ಟು ಬಲಿಷ್ಟವಾಗಿದೆ. ಭಾರತ ಕೂಡ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ ಬಲಿಷ್ಠಗೊಳ್ಳುತ್ತಿದೆ. ಇಂಡೋ-ಪಾಕ್ ಯುದ್ಧವು ಚರಿತ್ರೆಯಲ್ಲಿ ಭಾರತದ ಶಕ್ತಿಗೆ ಸ್ಥಾನ ಒದಗಿಸಿದೆ. ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಇದು ನಮಗೆ ಮತ್ತಷ್ಟು ಸ್ಫೂರ್ತಿಯಾಗಿದೆ ಎಂದರು.
ಶೌರ್ಯ ಪ್ರಶಸ್ತಿ ಪಡೆದ ಯೋಧರಿಗೆ ರಾಜ್ಯ ಸರ್ಕಾರ ನೀಡುವ ಅನುದಾನ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಸರಾಸರಿ 5 ಪಟ್ಟು ಹೆಚ್ಚಳ ಮಾಡಲಾಗಿದೆ. ಪರಮವೀರಚಕ್ರ ಪಡೆದವರಿಗೆ 25 ಲಕ್ಷ ರೂ.ದಿಂದ 1.5 ಕೋಟಿ ರೂ.ಗಳು, ಮಹಾವೀರಚಕ್ರ ವಿಜೇತರಿಗೆ 12 ಲಕ್ಷ ರೂ.ಗೆ ಬದಲಾಗಿ 1 ಕೋಟಿ ರೂ.ಗಳು, ಅಶೋಕ ಚಕ್ರ ಪಡೆದವರಿಗೆ 25 ಲಕ್ಷ ರೂ.ಗಳಿಗೆ ಬದಲಾಗಿ 1.5 ಕೋಟಿ ರೂ.ಗಳು, ಕೀರ್ತಿ ಚಕ್ರ ಪಡೆವರಿಗೆ 1 ಕೋಟಿ ರೂ.ಗಳು, ವೀರಚಕ್ರ ವಿಜೇತರಿಗೆ 50 ಲಕ್ಷ ರೂ.ಗಳು, ಶೌರ್ಯ ಚಕ್ರ ವಿಜೇತರಿಗೆ 50 ಲಕ್ಷ ರೂ.ಗಳು, ಸೇನಾ, ನೌಕಾ, ವಾಯು ಸೇನಾ ಮೆಡಲ್ ಪಡೆದವರಿಗೆ 15 ಲಕ್ಷ ರೂ.ಗಳು, ಮೆನ್ ಶನ್ ಎನ್.ಡಿ.ಎಸ್ ಪ್ಯಾಚ್ ಪಡೆದವರಿಗೆ 15 ಲಕ್ಷ ರೂ.ಗಳನ್ನು ಹೆಚ್ಚಿಸಲು ಆದೇಶವನ್ನು ಹೊರಡಿಸಲಾಗಿದೆ ಎಂದು ವಿವರಿಸಿದರು.










