ವಿಶ್ವದಾದ್ಯಂತ ಕ್ರಿಸ್‍ಮಸ್ ಆಚರಣೆ – ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಮನಾಥ್ ಕೋವಿಂದ್.

71
firstsuddi

ನವದೆಹಲಿ : ವಿಶ್ವದಾದ್ಯಂತ ಕ್ರಿಸ್‍ಮಸ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.

ಟ್ವೀಟ್ ಮೂಲಕ ಶುಭಾಶಯ ಕೋರಿರುವ ಪ್ರಧಾನಿ ಮೋದಿಯವರು, ಎಲ್ಲರಿಗೂ ಕ್ರಿಸ್‍ಮಸ್ ಶುಭಾಶಯಗಳು. ಏಸು ಕ್ರಿಸ್ತರ ಜೀವನ, ಉದಾತ್ತ ಸಂದೇಶಗಳನ್ನು ನಾವು ನೆನೆಯೋಣ. ಸೇವೆ, ದಯೆ, ನಮ್ರತೆಯನ್ನು ಯೇಸು ಕ್ರಿಸ್ತರ ಸಂದೇಶಗಳು ಪ್ರತಿಪಾದಿಸಿವೆ. ಎಲ್ಲರೂ ಆರೋಗ್ಯವಂತರಾಗಿ ಮತ್ತು ಸಮೃದ್ಧಿಯನ್ನು ಹೊಂದಲಿ. ಎಲ್ಲೆಡೆ ಸಾಮರಸ್ಯವಿರಲಿ ಎಂದು ಹೇಳಿದ್ದಾರೆ.

ನಾಗರಿಕರು, ವಿಶೇಷವಾಗಿ ಕ್ರೈಸ್ತ ಸಹೋದರ-ಸಹೋದರಿಯರಿಗೆ ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು. ಈ ಸಂತೋಷದಾಯಕ ಸಂದರ್ಭದಲ್ಲಿ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಆಧರಿಸಿ ಸಮಾಜವನ್ನು ನಿರ್ಮಿಸಲು ನಮ್ಮ ಜೀವನದಲ್ಲಿ ಯೇಸು ಕ್ರಿಸ್ತರ ಬೋಧನೆಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ಎಲ್ಲರಿಗೂ ಕ್ರಿಸ್‍ಮಸ್ ಶುಭಾಶಯಗಳು. ಎಲ್ಲರ ಆರೋಗ್ಯ, ಸಂತೋಷ ಮತ್ತು ಸಾಮರಸ್ಯವನ್ನು ಬಯಸುತ್ತೇನೆ ಎಂದು ಶುಭಹಾರೈಸಿದ್ದಾರೆ.

ಓಮಿಕ್ರಾನ್ ಹೆಚ್ಚಳ ಹಿನ್ನೆಲೆ ಕ್ರಿಸ್‍ಮಸ್ ಸಂಭ್ರಮಾಚರಣೆಗೆ ಕೆಲವೊಂದು ನಿರ್ಬಂಧ ಹೇರಿರುವ ಸರ್ಕಾರ, ಜನತೆಗೆ ಕೋವಿಡ್ ನಿಯಮಗಳನ್ನು ಪಾಲಿಸಿ ಸರಳವಾಗಿ ಕ್ರಿಸ್‍ಮಸ್ ಆಚರಿಸುವಂತೆ ಸಲಹೆ ನೀಡಿದೆ.