ನವದೆಹಲಿ : ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಹೊಸ ಹೆಸರುಗಳನ್ನು ಇಟ್ಟಿತ್ತು. ಚೀನಾದ ಈ ನಡೆಗೆ ಭಾರತ ತೀವ್ರವಾಗಿ ಖಂಡಿಸಿದೆ.
ಚೀನಾ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಬುಧವಾರದಂದು ಎಂಟು ವಸತಿ ಪ್ರದೇಶಗಳು (ಗ್ರಾಮಗಳು), ನಾಲ್ಕು ಪರ್ವತಗಳು, ಎರಡು ನದಿಗಳು ಮತ್ತು ಒಂದು ಪರ್ವತ ಮಾರ್ಗ ಸೇರಿ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾದ ಅಕ್ಷರಗಳು, ಟಿಬೆಟಿಯನ್ ಮತ್ತು ರೋಮನ್ ವರ್ಣಮಾಲೆಯಲ್ಲಿ ಹೊಸ ಹೆಸರುಗಳನ್ನು ಇಡಲಾಗಿತ್ತು.
ಚೀನಾದ ನಡೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತ, “ಅರುಣಾಚಲ ಪ್ರದೇಶ ರಾಜ್ಯವು ಅವಿಭಾಜ್ಯ ಅಂಗ. ಅದು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ. ನೂತನ ಹೆಸರುಗಳನ್ನು ಇಡುವುದರಿಂದ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ’’ ಎಂದು ಎಂದು ತಿರುಗೇಟು ನೀಡಿದೆ.
1962ರ ಚೀನಾ-ಭಾರತ ಯುದ್ಧ ನಡೆದಾಗಿನಿಂದಲೂ ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್’ ಎಂದು ಪ್ರತಿಪಾದಿಸುವ ಚೀನಾ ಈಗಾಗಲೇ ಅರುಣಾಚಲ ಪ್ರದೇಶಕ್ಕೆ ಚೀನಿ ಭಾಷೆಯಲ್ಲಿ ‘ಝಂಗ್ನಾನ್’ ಎಂದು ಹೆಸರಿಟ್ಟಿದೆ. ಅಲ್ಲದೇ 2017ರಲ್ಲಿ ಇಲ್ಲಿನ ಆರು ಸ್ಥಳಗಳಿಗೆ ನೂತನ ಹೆಸರುಗಳನ್ನು ಇಟ್ಟಿತ್ತು.










