ಚೆನ್ನೈ : ತಮಿಳುನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈ, ಕಾಂಚಿಪುರಂ, ತಿರುವಲ್ಲೂರ್, ಚೆಂಗಲೆಪಟ್ಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿಯಲ್ಲಿ ಉಂಟಾಗಿರುವ ಚಂಡಮಾರುತವು ರಾಜ್ಯದಲ್ಲಿ ಭಾರೀ ಮಳೆಗೆ ಕಾರಣವಾಗಿದೆ. ರಾಜಧಾನಿ ಚೆನ್ನೈನಲ್ಲಿ 20 ಸೆ.ಮೀ.ನಷ್ಟು ಮಳೆಯಾಗಿದ್ದು, ರಾಜಧಾನಿ ಮತ್ತು ಉಪನಗರಗಳಲ್ಲಿನ ರಸ್ತೆಗಳು ಹಾಗೂ ಸುರಂಗಮಾರ್ಗಗಳು ಜಲಾವೃತವಾಗಿವೆ. ಮನೆಗಳಿಗೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ತೀವ್ರ ಮಳೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಮಳೆ ಪರಿಣಾಮ ವಿದ್ಯುತ್ ಸ್ಪರ್ಶದಿಂದಾಗಿ ಬಾಲಕ ಸೇರಿ ಮೂವರು ಸಾವನ್ನಪ್ಪಿದ್ದಾರೆ.










