ಬಾಸಿಸಂ ಬಿಡಿ : ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತಾಕೀತು…

71
firstsuddi

ಬೆಂಗಳೂರು : ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಯುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳ ವಿರುದ್ಧ ಗರಂ ಆದರು. ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲಾಧಿಕಾರಿಗಳ ಜೊತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳು, ಓಮಿಕ್ರಾನ್ ತಡೆಗೆ ಪೂರ್ವಸಿದ್ಧತೆ, ನೆರೆ ಪರಿಹಾರ ವಿತರಣೆ, ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸುತ್ತಿರುವ ಸಿಎಂ, ನೀವು ಜನರ ಸೇವೆ ಮಾಡುವ ಸಾರ್ವಜನಿಕ ಸೇವಾಧಿಕಾರಿಗಳು. ನೀವು ಬಾಸಿಸಂ ಬಿಡಿ. ನೀವು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೌದು. ಆದರೆ, ಫೀಲ್ಡಿನಲ್ಲೂ ಅದೇ ರೀತಿ ಕೆಲಸ ಮಾಡಬೇಡಿ. ಜನರ ನಡುವೆ ಹೋಗಿ ಜನರ ಜೊತೆ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಕೆಳಹಂತದ ಅಧಿಕಾರಿಗಳು ನಿಮ್ಮಂತೆಯೇ ವರ್ತಿಸಲು ಅವಕಾಶ ಕೊಡಬೇಡಿ. ನಿಮ್ಮ ಸ್ವಂತಿಕೆ, ವಿವೇಚನೆ ಬಳಸಿ ಕೆಲಸ ಮಾಡಿ. ಅಧಿಕಾರ ನಿಮ್ಮಲ್ಲಿ ಇನ್ನಷ್ಟು ಮೃದುತ್ವ, ವಿನಯತೆ ತರಬೇಕು. ಹಾಗಾಗಿ, ಎಚ್ಚರಿಕೆಯಿಂದ ಆಡಳಿತ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ನೆರೆ ಪರಿಹಾರವನ್ನ ಸರಿಯಾಗಿ ವಿಲೇವಾರಿ ಮಾಡದ ಜಿಲ್ಲಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಿಎಂ ಬೊಮ್ಮಾಯಿ ಕೆಲಸ ಆಗಿಲ್ಲ ಅಂತ ಕೆಳಗಿನ ಅಧಿಕಾರಿಗಳ ಮೇಲೆ ಆಪಾದನೆ ಮಾಡಬೇಡಿ. ಕೆಲಸಗಳು ಆಗದಿರುವುದಕ್ಕೆ ನೀವೇ ಹೊಣೆ, ನಿಮ್ಮದೇ ಹೊಣೆಗಾರಿಕೆ. ಪರಿಹಾರ ಆ್ಯಪ್ ನಲ್ಲಿ ಅಪ್ ಲೋಡ್ ಮಾಡಿದ 48 ಗಂಟೆಗಳ ಒಳಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.