ಚಿಕ್ಕಮಗಳೂರು : ಅಗ್ನಿ ಅನಾಹುತಗಳಿಂದ ಅರಣ್ಯ ಸೇರಿದಂತೆ ಅಲ್ಲಿನ ವನ್ಯ ಜೀವಿಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ ಎಂದು ಅರಣ್ಯ ಸಂರಕ್ಷಣಾಧಿಕಾರಿ ಕಾಂತರಾಜು ಹೆಚ್.ಸಿ ತಿಳಿಸಿದರು. ಅವರು ಮಂಗಳವಾರ ನಗರದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು ಭದ್ರಾ ಹುಲಿ ಸಂರಕ್ಷಿತ ಕಚೇರಿ ಸಭಾಂಗಣದಲ್ಲಿ ಬೆಂಕಿ ನಿಯಂತ್ರಣ ಕ್ರಮಗಳು ಕುರಿತ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ಬೇಸಿಗೆ ಕಾಲದಲ್ಲಿ ಮರದ ಎಲೆಗಳು ಒಣಗಿ ಉದುರಿದ್ದು ಹೆಚ್ಚಾಗಿ ಬೆಂಕಿ ಬೀಳುವ ಸಂಭವ ಇರುವ ಹಿನ್ನೆಲೆಯಲ್ಲಿ ಅಗ್ನಿ ಅವಗಡಗಳು ಸಂಭವಿಸದಂತೆ ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದರು.
ಜನಸಾಮಾನ್ಯರ ನಿರ್ಲಕ್ಷ್ಯ, ಆಕಸ್ಮಿಕವಾಗಿ ಅಥವಾ ಇನ್ನಿತರೆ ಉದ್ದೇಶಗಳಿಂದ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಬೆಂಕಿ ಬಿದ್ದು, ಅರಣ್ಯ ನಾಶವಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೌಂಡರಿ ಡಿ ಲೈನ್ ೩೦೭ ಕಿ.ಮೀ ಉದ್ದವಿದ್ದು, ಈಗಾಗಲೆ ೧೦ ಮೀ ಅಗಲದಲ್ಲಿ ಬೆಂಕಿ ಲೈನ್ಗಳನ್ನು ಸ್ವಚ್ಚಗೊಳಿಸುವ ನಿರ್ವಹಣಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಭಯಾರಣ್ಯಕ್ಕೆ ಬೆಂಕಿ ಬಿದ್ದ ಬಗ್ಗೆ ಮಾಹಿತಿ ಪಡೆದ ಕೂಡಲೇ ಸಮೀಪದ ಕಳ್ಳಬೇಟೆ ನಿಗ್ರಹ ತಂಡ, ಬೆಂಕಿ ರಕ್ಷಣಾ ತಂಡ ಹಾಗೂ ಜಾಗ್ರತಾ ತಂಡದವರು ಬೆಂಕಿ ನಿಯಂತ್ರಿಸಲು ಮುಂದಾಗಬೇಕು, ಈಗಾಗಲೇ ಬೆಂಕಿ ನಿಯಂತ್ರಣಕ್ಕೆ ೬೨ ಬೆಂಕಿ ರಕ್ಷಣಾ ತಂಡಗಳನ್ನು ನೇಮಿಸಲಾಗಿದ್ದು, ಇವು ೨೪ ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿವೆ ಎಂದರು. ಭದ್ರಾ ಹುಲಿ ಸಂರಕ್ಷಿತ ಆಸು ಪಾಸಿನಲ್ಲಿ ೪೮ ಗ್ರಾಮಗಳಲ್ಲಿನ ಗ್ರಾಮಗಳ ಪರಿಸರ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಬೆಂಕಿಯನ್ನು ನಿಂತ್ರಿಸುವ ಕಾರ್ಯಕ್ಕೆ ಸಹಕರಿಸುವಂತೆ ಸಭೆ ನಡೆಸಬೇಕೆಂದು ವಲಯ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರು.
ಸಾರ್ವಜನಿಕರಲ್ಲಿ ಅರಣ್ಯ ಸಂರಕ್ಷಣೆಗೆ ಅರಿವು ಮೂಡಿಸಲು ಬೀದಿ ನಾಟಕ ಸೇರಿದಂತೆ ಮತ್ತಿತರ ಅರಿವು ಕಾರ್ಯಕ್ರಮವನ್ನು ಕೈಗೊಳ್ಳಬೇಕೆಂದು ತಿಳಿಸಿದರು. ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತಗಳು ಕಂಡಕೂಡಲೇ ಸಾರ್ವಜನಿಕರು ಈ ಬಗ್ಗೆ ಮಾಹಿತಿಯನ್ನು ಸಮೀಪದ ಅರಣ್ಯ ಇಲಾಖೆಯ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ದೂ.ಸಂ.೦೮೨೬೨-೨೩೪೯೦೪, ೨೩೦೦೩೨ ಗೆ ನೀಡಬೇಕೆಂದು ತಿಳಿಸಿದರು.
ಭದ್ರಾ ಅಭಯಾರಣ್ಯದಲ್ಲಿ ನಡೆದ ಮೊದಲನೇ ಹಂತದ ಹುಲಿ ಗಣತಿಯಲ್ಲಿ ೬ ಹುಲಿಗಳು ನೇರವಾಗಿ ಕಂಡುಬಂದಿದ್ದು, ಅವುಗಳಲ್ಲಿ ೪ ವಯಸ್ಕ ೨ ಮರಿಗಳು ದರ್ಶನವಾಗಿವೆ ಈ ಸಂದರ್ಭದಲ್ಲಿ ಆನೆ, ಜಿಂಕೆ, ಕಾಡೆಮ್ಮೆ, ಕಪ್ಪು ಚಿರತೆ, ನವಿಲು, ಕಡವೆ, ಪಕ್ಷಿಗಳು ಕಂಡುಬಂದಿವೆ ಎಂದರು.
ಸಭೆಯಲ್ಲಿ ಸಹಾಯಕ ಉಪ ಸಂರಕ್ಷಣಾಧಿಕಾರಿ ಚಂಗಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ, ವೈಲ್ಡ್ ಕ್ಯಾಪ್ ಸಿನ ಶ್ರೀದೇವ್ ಹುಲಿಕೆರೆ, ಡಿ.ವಿ.ಗಿರೀಶ್, ಪತ್ರಕರ್ತರು ಹಾಗೂ ಪರಿಸರ ಪ್ರೇಮಿ ಗಿರಿಜಾಶಂಕರ್, ವಲಯ ಅರಣ್ಯಾಧಿಕಾರಿಗಳಾದ ಕೃಷ್ಣೇಗೌಡ, ರವೀಂದ್ರ, ಉಲ್ಲಾಸ್, ರಾಘವೇಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.










