ಮೂಡಿಗೆರೆ : ಇತ್ತೀಚಿನ ದಿನಗಳಲ್ಲಿ ಫೇಸ್‍ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರಭಾವ ಬೀರ್ತಿದೆ. ಯಾವುದೇ ಪ್ರಚಲಿತ ಘಟನೆಗಳಾದ್ರು ಕ್ಷಣಾರ್ಧದಲ್ಲಿ ಜಗತ್ತೇನೆ ಆವರಿಸಿಬಿಡುತ್ತೆ. ಇದರಿಂದ ಸಾಮಾಜಿಕ ಜಾಲತಾಣಗಳು ಒಳ್ಳೆದು-ಕೆಟ್ಟದ್ದು ಎರಡನ್ನೂ ಮಾಡ್ತಿದೆ ಅನ್ನೋದ್ರಲ್ಲಿ ಸಂದೇಹವಿಲ್ಲ. ಆದ್ರೆ, ನಾಲ್ಕು ವರ್ಷದ ಹಿಂದೆ ನಾಲ್ವರಿಂದ ಆರಂಭವಾದ ವಾಟ್ಸಾಪ್ ಗ್ರೂಪ್ ಇಂದು 250ರ ಗಡಿ ದಾಟಿ ಮಾಡಿರೋ ಒಳ್ಳೆ ಕೆಲಸಕ್ಕೆ ಎಲ್ಲರೂ ಶಹಬ್ಬಾಸ್ ಅನ್ನಲೇಬೇಕು.
ನಮ್ಮುಡುಗ್ರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಮಗ್ಗಲಮಕ್ಕಿ ದಿವಿನ್ ಎಂಬುವರ 5-4-2014ರಲ್ಲಿ ಆರಂಭಿಸಿದ ವಾಟ್ಸಾಪ್ ಗ್ರೂಪ್‍ನಲ್ಲಿ ಇಂದು 250ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ಗ್ರೂಪ್‍ನಲ್ಲಿ ರಾಜ್ಯದ ಮೂಲೆ-ಮೂಲೆಯ ಯುವಕರು, ಅಫಿಯಲ್ಸ್‍ಗಳು ಇದ್ದಾರೆ. ಈ ಗ್ರೂಪಿನ ಸದಸ್ಯರು ಒಬ್ಬರಿಗೊಬ್ರು ಪರಿಚಿಯವಿಲ್ಲ. ಒಬ್ಬರಿಂದ ಒಬ್ಬರು ಗ್ರೂಪ್ ಸೇರಿದ ಮೇಲೆ ಪರಿಚಿತವಾಗಿದ್ದಾರೆ. ಆದ್ರೆ, ಕೆಲವರು ಒಬ್ಬರ ಮುಖವನ್ನ ಒಬ್ಬರು ಇಂದಿಗೂ ನೋಡಿಲ್ಲ. ಏನೇ ಒಳ್ಳೆದು ಕೆಟ್ಟದ್ದು ಇದ್ರು ಎಲ್ಲಾ ಗ್ರೂಪ್‍ನಲ್ಲಿ ಮಾತನಾಡ್ತಾರೆ. ಕಷ್ಟ ಎಂದವರಿಗೆ ತಮ್ಮ ಕೈಲಾದ ಸಹಾಯವನ್ನೂ ಮಾಡ್ತಾರೆ.
ಹೀಗೆ ವಾಟ್ಸಾಪ್‍ನಲ್ಲಿ ಚಾಟ್ ಮಾಡುವಾಗ ದೇವರಮನೆ ಗುಡ್ಡ ಪರಿಸರ ನಾಶವಾಗಿದೆ ಎಂದು ಚರ್ಚೆ ನಡೆಯುತ್ತೆ. ಆಗ ಎಲ್ಲರೂ ಒಗ್ಗೂಡಿ 14-01-2018ರ ಭಾನುವಾರವನ್ನ ನಿಗಧಿಪಡಿಸಿ ದೇವರಮನೆ ಗುಡ್ಡವನ್ನ ಶುಚಿ ಮಾಡಲು ತೀರ್ಮಾನಿಸಿದ್ರು. ಈ ಬಗ್ಗೆ ಗ್ರೂಪ್‍ನಲ್ಲಿ ಪ್ರವಾಸಿಗರಿಂದ ಪ್ಲಾಸ್ಟಿಕ್, ಬಿಯರ್ ಬಾಟಲಿಗಳು ಬೆಟ್ಟದ ತುಂಬೆಲ್ಲಾ ಹರಿಡಿಡೋ ಫೋಟೋವನ್ನೂ ಹಾಕಿದ್ರು. ಕೂಡಲೇ ಜಾಗೃತರಾದ ಗ್ರೂಪಿನ ಎಲ್ಲಾ ಸದಸ್ಯರು ಮಾತನಾಡಿಕೊಂಡು ಒಂದು ದಿನ ಎಲ್ಲರೂ ಸೇರಿ ಕ್ಲೀನ್ ಮಾಡೋಣ ಎಂದು ಇದೀಗ ಕ್ಲೀನ್ ಮಾಡಿದ್ದಾರೆ. ರಾಜ್ಯದ ಮೂಲೆ-ಮೂಲೆಯಿಂದ ಬಂದಂತಹಾ ಎಲ್ಲರೂ ದೇವರಮನೆ ಬೆಟ್ಟದಲ್ಲಿ ಒಬ್ಬರ ಮುಖವನ್ನೊಬ್ಬರು ನೋಡ್ಕೊಂಡು, ಪರಿಚಯ ಮಾಡ್ಕೊಂಡು ದೇವರ ಮನೆ ಗುಡ್ಡವನ್ನ ಕ್ಲೀನ್ ಮಾಡಿದ್ದಾರೆ. ಮುಂದಿನ ದಿನಗಳಲ್ಲು ಹೀಗೆ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಲು ಗ್ರೂಪಿನ ಸದಸ್ಯರು ನಿರ್ಧರಿಸಿದ್ದಾರೆ.
ಇವ್ರ ಈ ನಿರ್ಧಾರಕ್ಕೆ ಮೂಡಿಗೆರೆ ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಗ್ರೂಪಿನ ಸದಸ್ಯ ರತನ್ ಕೂಡ ಇವರಿಗೆ ಕೈಜೋಡಿಸಿದ್ದಾರೆ. ರಾಜ್ಯದ ಮೂಲೆ-ಮೂಲೆಗಳಿಂದ ನಿನ್ನೆ ಮೂಡಿಗೆರೆಯ ದೇವರಮನೆ ಗುಡ್ಡಕ್ಕೆ ಬಂದ ನೂರಾರು ಜನ ಎಲ್ಲರೂ ಒಗ್ಗಟ್ಟಾಗಿ ದೇವರಮನೆ ಗುಡ್ಡವನ್ನ ಕ್ಲೀನ್ ಮಾಡಿದ್ದಾರೆ. ಸಾಲದಕ್ಕೆ ಮೂಡಿಗೆರೆಯ ಎಲ್ಲಾ ರಾಜಕೀಯ ಪಕ್ಷಗಳು ಮುಖಂಡರು ತಮ್ಮ ಪ್ರತಿಷ್ಠೆಯನ್ನ ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಿ ಈ ಕೆಲಸ ಮಾಡಿದ್ದಾರೆ. ಒಟ್ಟು ಎರಡು ಟ್ರ್ಯಾಕ್ಟರ್ ಬಿಯರ್ ಬಾಟಲಿ, ಎರಡು ಟ್ರ್ಯಾಕ್ಟರ್ ಪ್ಲಾಸ್ಟಿಕ್‍ನ ಕ್ಲೀನ್ ಮಾಡಿದ್ದಾರೆ. ಇದರಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಿಯರ್ ಬಾಟಲಿಗಳಿಂದ ತುಂಬಿ ಹೋಗಿದ್ದ ಹಚ್ಚಹಸಿರಿನ ದೇವರಮನೆ ಗುಡ್ಡ ಇದೀಗ ತುಂಬು ಮುತ್ತೈದೆಯಂತೆ ಫಳ-ಫಳ ನಳನಳಿಸ್ತಿದೆ. ಇಲ್ಲಿಗೆ ಬಂದು ಕ್ಲೀನ್ ಮಾಡಿದ ಎಲ್ಲಾ ಸದಸ್ಯರು ಇನ್ಮುಂದೆ ಇಲ್ಲಿಗೆ ಬರೋ ಪ್ರವಾಸಿಗರು ಪ್ಲಾಸ್ಟಿಕ್ ಹಾಗೂ ಬಿಯರ್ ಬಾಟಲಿಗಳನ್ನ ಎಲ್ಲೆಂದರಲ್ಲಿ ಎಸೆಯಬಾರದೆಂದು ಎಲ್ಲರೂ ಸೇರಿ ನಾಮಫಲಕ ಹಾಕಿ, ಪ್ರವಾಸಿಗರಿಗೆ ಮನವಿ ಮಾಡ್ಕೊಂಡಿದ್ದಾರೆ.
ಇದೇ ವೇಳೆ, ಗ್ರೂಪಿನ ಸದಸ್ಯ ಪ್ರದೀಪ್ ಗೌಡ ಮಾತನಾಡಿ, ನಾವು ವಾಟ್ಸಾಪ್ ಗ್ರೂಪಿನಿಂದ ಆದಷ್ಟು ಸಮಾಜ ಮುಖಿ ಕಾರ್ಯಕ್ರಮವನ್ನೂ ನಮ್ಮ ಕೈಲಾದ ಮಟ್ಟಿಗೆ ಮಾಡ್ತಿದ್ದೇವೆ. ಮುಂದಿನ ದಿನಗಳಲ್ಲೂ ಕಷ್ಟ ಎಂದವರಿಗೆ ಸಮಾನ ಮನಸ್ಕರರ ನಮ್ಮ ಗ್ರೂಪಿನಿಂದ ಆದಷ್ಟು ಸಹಾಯ ಮಾಡೋದಾಗಿ ನಿರ್ಧರಿಸಿದ್ದಾರೆ. ಗ್ರೂಪಿನ ಇನ್ನೊರ್ವ ಸದಸ್ಯ ವಿನಯ್ ರಾಜ್ ಮಾತನಾಡಿ, ಇತ್ತೀಚಿಗೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಚಿಕ್ಕಮಗಳೂರು, ಮಡೀಕೆರೆಯ ಪ್ರಕೃತಿ ಸೌಂದರ್ಯ ಹೆಚ್ಚಿನ ಪ್ರವಾಸಿಗರಿಂದ ಹಾಳಾಗ್ತಿದೆ. ಪ್ರವಾಸಿಗರು ಈ ಸೌಂದರ್ಯವನ್ನ ಉಳಿಸಿ ಬೆಳೆಸುವ ಅಭಿಲಾಷೆ ಹೊಂದಿದ್ದಲ್ಲಿ ಮಾತ್ರ ಈ ಪ್ರಕೃತಿ ಸೌಂದರ್ಯ ಮುಂದಿನ ತಲೆಮಾರಿಗೂ ಉಳಿಯಲಿದೆ. ಇಲ್ಲವಾದ್ರೆ, ಈ ಸೌಂದರ್ಯ ನಾಶವಾಗಲಿದೆ. ಯುವಜನತೆ ವರವಾಗಿ ಸಿಕ್ಕಿರೋ ಈ ಸೌಂದರ್ಯವನ್ನ ಉಳಿಸಿ ಬೆಳೆಸಬೇಕು ಎಂದಿದ್ದಾರೆ.
ಒಂದು ವಾಟ್ಸಾಪ್ ಗ್ರೂಪ್‍ನಿಂದ ಈ ರೀತಿಯ ಸಮಾಜ ಮುಖ ಕಾರ್ಯಕ್ಕೆ ಮಲೆನಾಡಿಗರು ಶಹಬ್ಬಾಸ್ ಅಂದಿದ್ದಾರೆ. ವಾಟ್ಸಾಪ್ ಗ್ರೂಪ್‍ಗಳು ಬರೀ ಮನೋರಂಜನೆಗಷ್ಟೆ ಇಲ್ಲ. ಇದರಿಂದ ಒಳ್ಳೆಯ ಕೆಲಸಗಳು ಆಗ್ತಾವೆ ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್ ಎಂದು ಸಾಮಾಜಿಕ ಜಾಲತಾಣಗಳ ಬಗ್ಗೆ ಮಲೆನಾಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಒಳ್ಳೆ ಕಾರ್ಯದಲ್ಲಿ ಪತ್ರಕರ್ತ ಶಿವಕಾಶಿ, ರಾಘವೇಂದ್ರ ಕೆಸವಳಲು, ಸಂತೋಷ್ ಹಂಡುಗುಳಿ, ಜೆಡಿಎಸ್ ಮುಖಂಡ ಪ್ರಕಾಶ, ಆದರ್ಶ, ಬಿಜೆಪಿ ಮುಖಂಡ ಸಂದರ್ಶ್ ಹಾರಗುಡ್ಡೆ, ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಡಿದಾಳು, ಸಂಜಯ್, ಕೊಟ್ಟಿಗೆಹಾರ ಸಂಜಯ್, ಸುದೇವ್ ಗುತ್ತಿ, ಸಂತೋಷ್ ಮುಗ್ರವಳ್ಳಿ, ರತನ್ ಬೆಳ್ಳೂರು, ಸಂದೀಪ್ ದಾರದಹಳ್ಳಿ ಸೇರಿದಂತೆ ಮುಂತಾದವರು ಈ ಬೆಟ್ಟದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ನೂರೈವತ್ತು ಅಧಿಕ ಜನರಿದ್ದ ತಂಡಕ್ಕೆ ಸೂಕ್ತ ಸಮಯದಲ್ಲಿ ಊಟದ ವ್ಯವಸ್ಥೆ ಮಾಡಿದ ಪ್ರಶಾಂತ್ ಬೆಟ್ಟಗೆರೆಯವರಿಗೆ ಗ್ರೂಪಿನ ಎಲ್ಲಾ ಸದಸ್ಯರು ವಿಶೇಷವಾದ ಅಭಿನಂದನೆ ಸಲ್ಲಿಸಿದ್ದಾರೆ.