ಚಾಮರಾಜನಗರ : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ದೂರು ನೀಡಿದ್ದರೂ ಆರೋಪಿಗಳನ್ನು ಬಂಧಿಸದೇ ರಾಜಾರೋಷವಾಗಿ ಓಡಾಡಲು ಬಿಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಡಿಸೆಂಬರ್ 6ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಹೊಣಕನಪುರ ಬಳಿ ಬಾಲಕಿಯು ಶಾಲೆಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಕೆಲವರು ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ಡಿಸೆಂಬರ್ 9ರಂದು ಬಾಲಕಿಯ ತಾಯಿ ಚಾಮರಾಜನಗರದ ಮಹಿಳಾ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಅರಣ್ಯ ಇಲಾಖೆಯ ಗಾರ್ಡ್ ಶಿವಣ್ಣ ನಾಯಕ, ಯಡವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಾವಲುಗಾರ ಜವರನಾಯಕ, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್, ಹೊಣಕನಪುರದ ನಾಗರಾಜು ಎಂಬವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆದರೆ ಘಟನೆ ನಡೆದು 25 ದಿನ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಅರಣ್ಯ ಇಲಾಖೆ ಗಾರ್ಡ್ ಶಿವಣ್ಣ ನಾಯಕ, ಕಾವಲುಗಾರ ಜವರನಾಯಕ, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್ ಎಂಬವರು ರಾಜಾರೋಷವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರೂ, ಅವರನ್ನು ಈವರೆಗೂ ಅಮಾನತು ಮಾಡಿಲ್ಲ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಡಿಸಿ, ಎಸ್ಪಿ, ಸಿಇಒ, ಡಿವೈಎಸ್ಪಿ ಎಲ್ಲರೂ ಮಹಿಳಾ ಅಧಿಕಾರಿಗಳಿದ್ದರೂ ನೊಂದ ಬಾಲಕಿಗೆ ಮಾತ್ರ ಇನ್ನೂ ಕೂಡ ನ್ಯಾಯ ಸಿಕ್ಕಿಲ್ಲ.










