ಬಣಕಲ್, ಬಾಳೂರು ನಾಡ ಕಚೇರಿಯಲ್ಲಿ ಕೆಟ್ಟು ನಿಂತ ಯೂಪಿಎಸ್ ; ಸಾರ್ವಜನಿಕರ ಪರದಾಟ…

124
firstsuddi

ಕೊಟ್ಟಿಗೆಹಾರ : ಬಣಕಲ್ ಹಾಗೂ ಬಾಳೂರು ಹೋಬಳಿಯ ನಾಡಕಚೇರಿಯಲ್ಲಿ ಸೋಲಾರ್ ಬ್ಯಾಟರಿಗಳು ಮತ್ತು ಯೂಪಿಎಸ್‍ಗಳು ಕೆಟ್ಟು ತಿಂಗಳುಗಳೇ ಕಳೆದಿದ್ದು ಸಕಾಲಕ್ಕೆ ಸೇವೆ ಪಡೆಯಲಾಗದೇ ಸಾರ್ವಜನಿಕರು ತೊಂದರೆ ಪಡುವಂತಾಗಿದೆ.

ವಿದ್ಯುತ್ ಇದ್ದಾಗ ಮಾತ್ರ ನಾಡಕಚೇರಿಗಳಲ್ಲಿ ಸೇವೆಗಳು ದೊರೆಯುತ್ತಿದ್ದು ವಿದ್ಯುತ್ ಕಡಿತಗೊಂಡರೆ ಮತ್ತೆ ವಿದ್ಯುತ್ ಬರುವವರೆಗೆ ಕಾದು ಸೇವೆ ಪಡೆಯುವ ಅನಿವಾರ್ಯತೆ ಸಾರ್ವಜನಿಕರದಾಗಿದೆ.

ಬಣಕಲ್ ಬಾಳೂರು ಹೋಬಳಿಯ ಗ್ರಾಮಗಳ ಗ್ರಾಮಸ್ಥರು ಹತ್ತಾರು ಕಿ.ಮಿ ದೂರದಿಂದ ನಾಡಕಚೇರಿಗೆ ಬಂದರೆ ವಿದ್ಯುತ್ ಇಲ್ಲದ ಸಮಯದಲ್ಲಿ ಗಂಟೆಗಟ್ಟಲೇ ಕೆಲಸ ಕಾರ್ಯಗಳನ್ನು ಬಿಟ್ಟು ನಾಡಕಚೇರಿ ಬಾಗಿಲು ಕಾಯುವಂತಾಗಿದೆ. ಪಹಣಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ಮತ್ತಿತರ ದಾಖಲೆಗಳು ಸಕಾಲಕ್ಕೆ ಸಿಗದೇ ಜನರು ಪರದಾಡುವಂತಾಗಿದೆ. ಒಂದು ಕೆಲಸಕ್ಕೆ ವಾರದಲ್ಲಿ 3-4 ದಿನ ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಬಿಟ್ಟು ನಾಡ ಕಚೇರಿಗೆ ಅಲೆದಾಡುವಂತಾಗಿದೆ.

ಬಣಕಲ್, ಜಾವಳಿ ಹೋಬಳಿ ಮಲೆನಾಡು ಪ್ರದೇಶವಾದ್ದರಿಂದ ವಿದ್ಯುತ್ ಆಗಾಗ ಕೈಕೊಡುವುದು ಸಾಮಾನ್ಯವಾಗಿದೆ.. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಯೂಪಿಎಸ್ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಾಳೂರು ಮತ್ತು ಬಣಕಲ್ ಹೋಬಳಿಯ ನಾಡಕಚೇರಿಯ ಸೋಲಾರ್ ಯುಪಿಎಸ್‍ಗಳು ಕೆಟ್ಟು ಹೋಗಿರುವ ಬಗ್ಗೆ ಈ ಮೊದಲು ಜಿಲ್ಲಾದಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತ್ತೊಮ್ಮೆ ಮರು ಪ್ರಸ್ತಾವನೆ ಸಲ್ಲಿಸಿ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮೂಡಿಗೆರೆ ತಹಸೀಲ್ದಾರ್ ಎಂ.ಎ.ನಾಗರಾಜ್ ಅವರು ಹೇಳಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ನಾಡಕಚೇರಿಯ ಯುಪಿಎಸ್ ಗಳನ್ನು ತುರ್ತಾಗಿ ಸರಿಪಡಿಸಿ ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಣಕಲ್ ನಾಡಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಬಿಎಸ್‍ಪಿ ತಾಲ್ಲೂಕು ಸಂಯೋಜಕ ಶ್ರೀಕಾಂತ್ ಹೊರಟ್ಟಿ ಅವರು ಹೇಳಿದ್ದಾರೆ.