ಚಿಕ್ಕಮಗಳೂರು: ಮನೆ ಹಕ್ಕುಪತ್ರ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಶೃಂಗೇರಿ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಶೃಂಗೇರಿ ಪ್ರವಾಸಿ ಮಂದಿರದಲ್ಲಿ ನಡೆದಿದೆ.
ಶೃಂಗೇರಿ ತಾಲೂಕಿನ ಕಾವಡಿ ಗ್ರಾಮದ ಸಂಜಯ್ ಕುಮಾರ್ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ, ತಹಸೀಲ್ದಾರ್ ಅಂಬುಜಾ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಳೆದ ಕೆಲವು ತಿಂಗಳಿನಿಂದಲೂ ತಹಶೀಲ್ದಾರ್ ವಿರುದ್ಧ ಭಾರೀ ಅಕ್ರಮ ಎಸಗಿರುವ ಆರೋಪ ಕೇಳಿಬರುತ್ತಿತ್ತು.
ಸಂಜಯ್ ಎಂಬುವರಿಗೆ ಮನೆಯ ಹಕ್ಕು ಪತ್ರ ನೀಡಲು 60 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಂಜಯ್ ಕುಮಾರ್ ಎಸಿಬಿಗೆ ದೂರು ನೀಡಿದ್ದರು. ಎಸಿಬಿ ಅಧಿಕಾರಿಗಳಾದ ಡಿವೈಎಸ್ ಪಿ ಗೀತಾ, ಇನ್ ಸ್ಪೆಕ್ಟರ್ ಮಂಜುನಾಥ್, ರಾಥೋಡ್ ನೇತೃತ್ವದಲ್ಲಿ ದಾಳಿ ಯೋಜನೆ ರೂಪಿಸಲಾಗಿತ್ತು. ನಿನ್ನೆ ಮಧ್ಯಾಹ್ನದ ವೇಳೆಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಸಂಜಯ್ ಕುಮಾರ್ ನಿಂದ 25 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಇಬ್ಬರನ್ನೂ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ತಹಶೀಲ್ದಾರ್ ಅಂಬುಜಾ ಟ್ರ್ಯಾಪ್ ಆಗಿದ್ದಾರೆ ಅನ್ನೋ ಸುದ್ದಿ ತಿಳಿಯುತ್ತಲೇ ಶೃಂಗೇರಿ ಪ್ರವಾಸಿ ಮಂದಿರದ ಬಳಿ ಜನರು ಜಮಾಯಿಸಿದ್ದರು. ಯಾವುದೇ ಕಾರಣಕ್ಕೂ ಕೂಡ ತಹಶೀಲ್ದಾರ್ ಅಂಬುಜಾರನ್ನ ಬಂಧಿಸಬಾರದು ಅಂತಾ ಅಧಿಕಾರಿಗಳ ಮೇಲೆ ಒತ್ತಡ ಹಾಕಿದರು. ಬಳಿಕ ತಹಸೀಲ್ದಾರ್ ಅಂಬುಜಾ ಮತ್ತು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.










