ಬಂಟ್ವಾಳ : ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಮದುವೆಯ ದಿನ ಕೊರಗಜ್ಜನ ವೇಷಭೂಷಣ ಧರಿಸಿ ಮದುಮಗ ಕುಣಿದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ವರ ಮತ್ತು ಆತನ ಸಂಗಡಿಗರ ವಿರುದ್ಧ ಪ್ರಕರಣ ದಾಖಲಾಗಿದೆ.
ಏನಿದು ಘಟನೆ : ಕೇರಳ ರಾಜ್ಯದ ಉಪ್ಪಳದ ಯುವಕನ ಜೊತೆ ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ನಿಶ್ಚಯವಾಗಿತ್ತು. ಜನವರಿ 6ರಂದು ವಧುವಿನ ಮನೆಗೆ ರಾತ್ರಿ ವರನ ಸ್ನೇಹಿತರ ಬಳಗ ಆಗಮಿಸಿತ್ತು. ಈ ವೇಳೆ ವರ ಕೊರಗಜ್ಜನ ವೇಷ-ಭೂಷಣ ಧರಿಸಿ ಮತ್ತು ಆತನ ಸಂಗಡಿಗರು ಕುಣಿದು ಕುಪ್ಪಳಿಸಿದ್ದರು. ಆ ವಿಡಿಯೋ ನಿನ್ನೆ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಕೂಡ ಇದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಗಳಷ್ಟೇ ಅಲ್ಲದೇ, ಮುಸ್ಲಿಂ ಸಮುದಾಯದವರೂ ಕೂಡ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ವಿಟ್ಲ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.










