ಭುವನೇಶ್ವರ್ : ಸಮಾಜ ಸೇವಕಿ ಹಾಗೂ ಪದ್ಮಶ್ರೀ ಪುರಸ್ಕೃತೆ ಶಾಂತಿದೇವಿ (88) ನಿನ್ನೆ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಎದೆನೋವು ಕಾಣಿಸಿಕೊಂಡು ಪ್ರಜ್ಞಾಹೀನರಾಗಿ ಶಾಂತಿ ದೇವಿ ಕುಸಿದು ಬಿದ್ದಿದ್ದಾರೆ. ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಏಪ್ರಿಲ್ 18, 1934 ರಂದು ಬಾಲಸೋರ್ ನಲ್ಲಿ ಜನಿಸಿದ ಶಾಂತಿ ದೇವಿ ಅವರು, ಬುಡಕಟ್ಟು ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ಶ್ರಮಿಸಿದರು. ಬುಡಕಟ್ಟು ಮಕ್ಕಳಿಗಾಗಿ ರಾಯಗಡ ಜಿಲ್ಲೆಯ (ಅವಿಭಜಿತ ಕೊರಾಪುಟ್ ಜಿಲ್ಲೆ) ಸಂಖಲ್ಪದರ್ ಗ್ರಾಮದಲ್ಲಿ ಆಶ್ರಮವನ್ನು ಸ್ಥಾಪಿಸಿ ಕುಷ್ಠ ರೋಗಿಗಳ ಸೇವೆಯನ್ನು ಮಾಡಿದ್ದರು. ಅಷ್ಟೇ ಅಲ್ಲದೇ ಅನಾಥರು, ನಿರ್ಗತಿಕರು ಮತ್ತು ಬಡ ಮಕ್ಕಳ ಪುನರ್ವಸತಿಗಾಗಿ ಅವರು 1964ರಲ್ಲಿ ರಾಯಗಡ ಜಿಲ್ಲೆಯ ಗುಣಪುರದಲ್ಲಿ ಸೇವಾ ಸಮಾಜ ಆಶ್ರಮವನ್ನು ಸ್ಥಾಪಿಸಿದರು. ಇವರ ಸಮಾಜ ಸೇವೆಗೆ ಪದ್ಮಶ್ರೀ ಪ್ರಶಸ್ತಿ, ಜಮುನಾಲಾಲ್ ಬಜಾಜ್ ಪ್ರಶಸ್ತಿ, ರಾಧಾನಾಥ್ ರಥ್ ಶಾಂತಿ ಪ್ರಶಸ್ತಿ ಸೇರಿ ಅನೇಕ ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಶಾಂತಿ ದೇವಿ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಬಡವರು ಮತ್ತು ಹಿಂದುಳಿದವರ ಧ್ವನಿಯಾಗಿದ್ದ ಶಾಂತಿ ದೇವಿ ಸದಾ ಸ್ಮರಣೀಯರು. ಬಡವರ ಕಷ್ಟವನ್ನು ತೊಡೆದುಹಾಕಿ, ಆರೋಗ್ಯಕರ ಮತ್ತು ಅತ್ಯುತ್ತಮ ಸಮಾಜ ರಚಿಸಲು ಅವರು ನಿಸ್ವಾರ್ಥವಾಗಿ ಕೆಲಸ ಮಾಡಿದರು. ಅವರ ನಿಧನದಿಂದ ನೋವಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.










