ಕರ್ಫ್ಯೂ, ಲಾಕ್‍ಡೌನ್‍ ಹೇರಬಾರದು, ಇದು ನನ್ನ ಅಭಿಪ್ರಾಯ : ಸಿ.ಟಿ.ರವಿ.

54
firstsuddi

ಬೆಳಗಾವಿ : ಕರ್ಫ್ಯೂ, ಲಾಕ್ ಡೌನ್ ಹೇರಬಾರದು. ಇದು ನನ್ನ ಅಭಿಪ್ರಾಯ, ವೈದ್ಯರು ಅಭಿಪ್ರಾಯ ಇದೇ ರೀತಿಯಿದೆ. ವೇಗವಾಗಿ ಸ್ಪ್ರೆಡ್ ಆಗುತ್ತೆ ಆದರೆ ಹಾನಿ ಹೆಚ್ಚು ಮಾಡಲ್ಲ ಎಂದು ತಜ್ಞರು ಹೇಳಿದ್ದಾರೆ. ಅನಗತ್ಯವಾಗಿ ಭಯಕ್ಕೆ ದೂಡುವ ಅವಶ್ಯಕತೆ ಇಲ್ಲ, ಆದ್ರೆ ಎಚ್ಚರ ವಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಗೋವಾದ ಪಣಜಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂ, ಲಾಕ್‍ಡೌನ್‍ಗೆ ನನ್ನ ವಿರೋಧವಿದೆ. ಕರ್ನಾಟಕ ಅಷ್ಟೇ ಅಲ್ಲ ಮಹಾರಾಷ್ಟ್ರ, ದೆಹಲಿಯಲ್ಲಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿಯೂ ದಿನೇದಿನೇ ಕೋವಿಡ್ ಜಾಸ್ತಿಯಾಗ್ತಿದೆ. ಸುದೈವವಶಾತ್ ಮೂರನೇ ಅಲೆಯಲ್ಲಿ ಪ್ರಾಣಾಪಾಯ ಕಡಿಮೆ ಇದೆ. ಐಸಿಯು ವೆಂಟಿಲೇಟರ್ ಗೆ ಹೋಗುವ ರೋಗಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಬಹಳ ಆತಂಕ ಪಡುವ ಅಗತ್ಯವಿಲ್ಲ, ಆದರೆ ಎಚ್ಚರದಿಂದ ಇರಬೇಕು. ಲಾಕ್ ಡೌನ್, ಕರ್ಫ್ಯೂ ಹೇರುವುದಕ್ಕಿಂತ ಕೆಲವು ನಿಯಮ ಹಾಕಬೇಕು. ಜನರನ್ನು ಎಚ್ಚರ ವಹಿಸುವಂತೆ ನೋಡಿಕೊಂಡು ಕೋವಿಡ್ ನಿಯಂತ್ರಿಸಬಹುದು. ಮೂರನೇ ಅಲೆಯಲ್ಲಿ ಹಾನಿ ಪ್ರಮಾಣ ಕಡಿಮೆ ಇರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಲಾಕ್ಡೌನ್ ಮಾಡಿ ಜೀವನ ಏಕೆ ಸಂಕಷ್ಟಕ್ಕೆ ದೂಡಬೇಕು? 3ನೇ ಅಲೆ ಕೇಸ್ ರೆಕಾರ್ಡ್ ತಗೆದು ನೋಡಿದಾಗ ಜೀವಕ್ಕೆ ಹಾನಿ ಪರ್ಸೆಂಟೇಜ್ ಕಡಿಮೆಯಿದೆ. ಹೀಗಿರುವಾಗ ಆತಂಕ ಪಡುವುದು ಏಕೆ. ಯಾರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ ಅವರಿಗೆ ಕಡಿಮೆ ಹಾನಿ ಆಗಿದೆ. ಯಾರಿಗೂ ಜೀವಹಾನಿ ಏನೂ ಆಗಿಲ್ಲ. ಎರಡು ವರ್ಷ ಸಂಕಷ್ಟದಲ್ಲಿದ್ದು ಜೀವನ ಕಟ್ಟಿಕೊಂಡಿದ್ದಾರೆ. ಅವರನ್ನೇಕೆ ಸಂಕಷ್ಟಕ್ಕೆ ದೂಡಬೇಕು? ಪರಿಸ್ಥಿತಿ ಕಾದು ನೋಡಬೇಕು, ಅನಗತ್ಯವಾಗಿ ಭಯಕ್ಕೆ ದೂಡುವ ಅವಶ್ಯಕತೆ ಇಲ್ಲ, ಆದರೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.