ಬೆಂಗಳೂರು : ವರಿಷ್ಠರು ಹೇಳಿದಾಗ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವಾಗ ಸಂಪುಟ ವಿಸ್ತರಣೆ ಮಾಡಬೇಕು, ಯಾವ ರೀತಿ ಮಾಡುವುದು ಎಂದು ಪಕ್ಷದ ವರಿಷ್ಠರ ಗಮನದಲ್ಲಿದೆ. ವರಿಷ್ಠರು ಯಾವಾಗ ನಮ್ಮನ್ನ ಕರೆದು ಮಾತನಾಡುತ್ತಾರೋ ಆ ಸಂದರ್ಭದಲ್ಲಿ ನಾನು ಎಲ್ಲ ವಿವರಗಳನ್ನು ಕೊಡಲಿದ್ದೇನೆ. ಅವರು ಹೇಳಿದಾಗ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನಿಗಮ ಮಂಡಳಿ ವಿಚಾರವಾಗಿ ಮಾತನಾಡಿ, ನಿಗಮ ಮಂಡಳಿ ನೇಮಕಾತಿ ಕುರಿತು ಪಕ್ಷದಲ್ಲಿ ಚರ್ಚೆಯಾಗಬೇಕು. ಪಕ್ಷದಲ್ಲಿ ಚರ್ಚೆಯಾದ ತಕ್ಷಣವೇ ನೇಮಕಾತಿ ಮಾಡಲಾಗುತ್ತದೆ. ಸದ್ಯ ನನ್ನ ಮುಂದೆ ನಿಗಮ-ಮಂಡಳಿ ನೇಮಕಾತಿ ಸಂಬಂಧ ಯಾವುದೇ ಪ್ರಸ್ತಾವನೆ ಇಲ್ಲ, ಪಕ್ಷದವರು ಅದನ್ನು ನೋಡುತ್ತಿದ್ದಾರೆ. ಅವರು ಪರಾಮರ್ಶೆ ಮಾಡಿ ವರದಿ ಕೊಡಲಿದ್ದಾರೆ. ಅದರ ಆಧಾರದಲ್ಲಿ ಮುಂದುವರೆಯುತ್ತೇವೆ ಎಂದರು.
ನಾಳೆಯಿಂದ ಮೂರು ದಿನ ಬಿಜೆಪಿ ಕಚೇರಿಯಲ್ಲಿ ಸಭೆ ಇದೆ, ಬಿಬಿಎಂಪಿ ವಿಚಾರದಲ್ಲಿ ಸಭೆ ನಡೆಯಲಿದೆ. ಬೇರೆ ಇನ್ಯಾವುದೇ ವಿಚಾರದ ಕುರಿತ ಸಭೆ ಇಲ್ಲ, ಇದಕ್ಕೂ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ ಕುರಿತು ಶಿಕ್ಷಣ ಸಚಿವರಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅವರೇ ಈ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎಂದರು.
ನಾನು ಅಧಿಕಾರಕ್ಕೆ ಬಂದು ಜನವರಿ 28ಕ್ಕೆ ಆರು ತಿಂಗಳಾಗಲಿದೆ. ಆರು ತಿಂಗಳ ಅವಧಿ ಬಗ್ಗೆ ಸುದ್ದಿಗೋಷ್ಠಿ ಮಾಡಿ ವಿವರ ತಿಳಿಸುತ್ತೇನೆ. ಕಿರು ಪುಸ್ತಕದಲ್ಲಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪ್ರಕಟಿಸುತ್ತೇವೆ ಎಂದ ಅವರು, ಬಜೆಟ್ ಸಿದ್ಧತೆ ಡಿಸೆಂಬರ್ ತಿಂಗಳಿಂದಲೇ ಪ್ರಾರಂಭಿಸಿದ್ದೆವು. ಆದರೆ ಕೋವಿಡ್ ಬಂದಿದ್ದರಿಂದ ಮತ್ತೆ ಮಾಡಲಿಲ್ಲ. ಜ. 25ರಂದು ಮತ್ತೊಂದು ಸಭೆ ಮಾಡುತ್ತೇನೆ. ಹಣಕಾಸು ಇಲಾಖೆ ಜೊತೆ ಚರ್ಚಿಸಿ ನಂತರ ಎಲ್ಲ ಇಲಾಖೆಗಳ ಪ್ರಸ್ತಾವನೆ ಬಗ್ಗೆ ಸುದೀರ್ಘ ಚರ್ಚೆ ಮಾಡಿ, ಸಂಘ-ಸಂಸ್ಥೆಗಳ ಬಗ್ಗೆ ಚರ್ಚೆ ಮಾಡಿ ಬಜೆಟ್ ಸಿದ್ಧತೆ ಮಾಡಲಾಗುತ್ತದೆ ಎಂದರು.
ಕಾಂಗ್ರೆಸ್ ಪಾದಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅವರವರ ಪಕ್ಷದವರು ನಿರ್ಣಯ ಮಾಡಿಕೊಳ್ಳುತ್ತಾರೆ. ನಾನು ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.










