ವಾರ್ಧಾ: ಮಹಾರಾಷ್ಟ್ರದ ವಾರ್ಧಾ-ಯವತ್ಮಾಲ್ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಏಳು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಮೃತ ವಿದ್ಯಾರ್ಥಿಗಳಲ್ಲಿ ಓರ್ವ ಗೊಂಡಿಯಾ ಜಿಲ್ಲೆಯ ತಿರೋರಾ ಕ್ಷೇತ್ರದ ಶಾಸಕ ವಿಜಯ್ ರಹಾಂಗದಲೆ ಅವರ ಪುತ್ರ ಆವಿಷ್ಕಾರ್ ಎಂದು ಗುರುತಿಸಲಾಗಿದ್ದು, ಉಳಿದವರನ್ನು ನೀರಜ್ ಚೌಹಾಣ್ (ಪ್ರಥಮ ವರ್ಷದ ಎಂಬಿಬಿಎಸ್), ನಿತೇಶ್ ಸಿಂಗ್ (2015 ಇಂಟರ್ನ್ ಎಂಬಿಬಿಎಸ್), ವಿವೇಕ್ ನಂದನ್ (2018, ಎಂಬಿಬಿಎಸ್ ಫೈನಲ್), ಪ್ರತ್ಯುಷ್ ಸಿಂಗ್ (2017 ಎಂಬಿಬಿಎಸ್), ಶುಭಂ ಜೈಸ್ವಾಲ್ (2017 ಎಂಬಿಬಿಎಸ್) ಮತ್ತು ಪವನ್ ಶಕ್ತಿ (2020 ಎಂಬಿಬಿಎಸ್) ಎಂದು ಗುರುತಿಸಲಾಗಿದೆ. ಮೃತ 7 ಮಂದಿ ಸಾವಂಗಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಜಿಲ್ಲೆಯ ಸೆಲ್ಸುರಾ ಪ್ರದೇಶದಲ್ಲಿ ರಾತ್ರಿ 1.30ರ ಸುಮಾರಿಗೆ ದಿಯೋಲಿಯಿಂದ ವಾರ್ಧಾ ಕಡೆಗೆ ಬರುತ್ತಿದ್ದ ಝೈಲೋ ಕಾರು ಸೇತುವೆ ಮೇಲಿಂದ ಸುಮಾರು 50 ಅಡಿ ಕೆಳಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಎಲ್ಲಾ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.










