ಪರಿಸರವನ್ನು ಸ್ವಚ್ಚವಾಗಿಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು : ಕೃಷ್ಣಮೂರ್ತಿ.

93
firstsuddi

ಚಿಕ್ಕಮಗಳೂರು : ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚ ಮತ್ತು ಸುಂದರವಾಗಿಡುವ ಮೂಲಕ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಕೃಷ್ಣಮೂರ್ತಿ ಹೇಳಿದರು.

ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ದಿ ಸಂಸ್ಥೆ ಹಾಗೂ ಇಂಟಿಗ್ರೇಟೆಡ್ ಕಮ್ಯೂನಿಟಿ ಡೆವೆಲಪ್‍ಮೆಂಟ್ ಸೊಸೈಟಿ 5 ದಿನಗಳ ಕಾಲ ಆಯೋಜಿಸಿದ್ದ ಘನ ತ್ಯಾಜ್ಯ ಘಟಕಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ನಿನ್ನೆ ಮಾತನಾಡಿದರು.

ಪರಿಸರ ಸ್ವಚ್ಚ ಮತ್ತು ಸುಂದರವಾಗಿದ್ದರೆ ವಾಯುಮಾಲಿನ್ಯ, ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಇಲ್ಲದಂತಾಗುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ದೂರವಾಗುತ್ತವೆ ಎಂದ ಅವರು ಸಾರ್ವಜನಿಕರು ಇದನ್ನು ಅರಿಯಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಟಿಗ್ರೇಟೆಡ್ ಕಮ್ಯೂನಿಟಿ ಡೆವೆಲಪ್‍ಮೆಂಟ್ ಸೊಸೈಟಿ ಅಧ್ಯಕ್ಷ ಜೆ.ವಿನಾಯಕ ಪರಿಸರ ಸ್ವಚ್ಚತೆ, ಘನ ತ್ಯಾಜ್ಯ ಘಟಕಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಕುರಿತು ಸಾರ್ವಜನಿಕರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ನಡೆಸಲಾಗಿದೆ ಎಂದರು.

5 ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಎರೆಹುಳು ಗೊಬ್ಬರ ತಯಾರಿಕೆ, ಘನ ತ್ಯಾಜ್ಯ ಘಟಕಗಳ ನಿರ್ವಹಣೆ ಮತ್ತು ಕಾರ್ಯಾಚರಣೆ, ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸುವ ಕುರಿತು ತರಬೇತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕಡೂರು ತಾಲ್ಲೂಕಿನ ಸ್ವಸಹಾಯ ಸಂಘದ ಮಹಿಳೆಯರಿಗೆ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾ ಸಮಾಲೋಚಕ ಹೆಚ್.ಪಿ.ರತ್ನಾಕರ್ ಉಪಸ್ಥಿತರಿದ್ದರು.