ದೊಡ್ಡಬಳ್ಳಾಪುರ : ಪ್ರಿಯಕರನೇ ಯುವತಿಗೆ ಚಾಕುವಿನಿಂದ ಇರಿದ ಘಟನೆ ನಗರದ ಯೋಗಿ ನಾರಾಯಣ ಬಡಾವಣೆಯಲ್ಲಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ. ಪ್ರಭಾವತಿ.ಡಿ (26) ಚಾಕು ಇರಿತಕ್ಕೆ ಒಳಗಾದ ಪ್ರಿಯತಮೆಯಾಗಿದ್ದಾಳೆ.
ಮೈಸೂರು ಮೂಲದ ಪ್ರಭಾವತಿ.ಡಿ ನಗರದ ಸರ್ಕಾರಿ ಸಾರ್ವಜನಿಕ ತಾಯಿ ಮಗು ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಇದೇ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಸ್ಟಾಪ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (32 ವರ್ಷ) ಜತೆ ಪ್ರೇಮಾಂಕುರವಾಗಿತ್ತು. ಇಬ್ಬರ ಪ್ರೀತಿಯ ವಿಷಯ ಎರಡು ಕುಟುಂಬಕ್ಕೂ ತಿಳಿದಿದ್ದು, ಮದುವೆ ಮಾತುಕತೆ ಸಹ ನಡೆದಿತ್ತು. ಆದರೆ, ಇಂದು ಬೆಳಗ್ಗೆ ಪ್ರಭಾವತಿ ಮನೆಗೆ ಬಂದ ಗಿರೀಶ್ ಆಕೆಯ ಹೊಟ್ಟೆ, ಕುತ್ತಿಗೆ, ಬೆನ್ನಿಗೆ ಚಾಕುವಿನಿಂದ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಚಾಕು ಇರಿದು ಪರಾರಿಯಾಗಿದ್ದ ಗಿರೀಶ್ ನನ್ನ ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಭಾವತಿ ಮತ್ತೊಬ್ಬ ಹುಡುಗನ ಜತೆ ಸಲುಗೆಯಿಂದ ಇದ್ದದ್ದೇ ಘಟನೆಗೆ ಕಾರಣ ಎನ್ನಲಾಗ್ತಿದೆ. ಘಟನೆ ಕುರಿತಂತೆ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










