ಚಿಕ್ಕಮಗಳೂರು : ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದರಿಂದ ಸುಸಂಸ್ಕೃತ ಸಮಾಜದ ನಿರ್ಮಾಣವಾಗುತ್ತದೆ ಎಂದು ಯೋಗ ಗುರು ರಾಮು ಗುರೂಜಿ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕ ಕಡೂರು ತಾಲ್ಲೂಕು ಚೌಳಹಿರಿಯೂರಿನ ಆತ್ಮ ವಿಕಾಸ ಯೋಗ ಮತ್ತು ಪಕೃತಿ ಚಿಕಿತ್ಸಾ ಕೇಂದ್ರದಲ್ಲಿ ನಿನ್ನೆ ಏರ್ಪಡಿಸಿದ್ದ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹನುಮಕ್ಕ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮೂಲ ಬೇರಾದ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಆಧುನಿಕತೆಯ ಭರದಲ್ಲಿ ನಾವು ಮರೆತಿದ್ದರಿಂದಾಗಿ ಸಮಾಜ ಅಧೋಗತಿಗೆ ಇಳಿದಿದೆ ಎಂದು ವಿಷಾದಿಸಿದ ಅವರು ಜಾನಪದ ಸಂಸ್ಕೃತಿಯನ್ನು ನಾವು ಮತ್ತೆ ಮೈಗೂಡಿಸಿಕೊಂಡರೆ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿಳಿಗಿರಿ ವಿಜಯಕುಮಾರ್ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ನಾವು ಮೈಗೂಡಿಸಿ ಕೊಂಡರೆ ಸುಸಂಸ್ಕೃತರಾಗಿ ಬದುಕಬಹುದು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹಿರಿಯ ವೀರಗಾಸೆ ಕಲಾವಿದ ಡಾ|| ಮಾಳೇನಹಳ್ಳಿ ಬಸಪ್ಪ ಮಾತನಾಡಿ ವೀರಗಾಸೆ ಕಲೆ ಹುಟ್ಟಿ ಬೆಳೆದ ಹಿನ್ನೆಲೆ ಮತ್ತು ಅದರ ಶ್ರೇಷ್ಠತೆಯನ್ನು ವಿವರಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹನುಮಕ್ಕ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ನಡೆದ ವೀರಗಾಸೆ, ನೃತ್ಯ, ತರಬೇತಿ ಕಾರ್ಯಗಾರದಲ್ಲಿ ಡಾ|| ಮಾಳೇನಹಳ್ಳಿ ಬಸಪ್ಪ ಮತ್ತು ಕಾರೇಹಳ್ಳಿ ಬಸಪ್ಪ ತರಬೇತಿ ನೀಡಿದರು.
ಪರಿಷತ್ತಿನ ಹೋಬಳಿ ಅಧ್ಯಕ್ಷ ಬಸವರಾಜಪ್ಪ, ವೀರಗಾಸೆ ಕಲಾವಿದ ಬಸವರಾಜಗುರು, ಆರ್.ಸುರೇಶ್, ಮಲ್ಲೇಗೌಡ, ಪ್ರಕಾಶ್ ಉಪಸ್ಥಿತರಿದ್ದರು.










