ಕೀವ್ : ಇಂದು ಕೂಡ ಉಕ್ರೇನ್ ಮೇಲೆ ರಷ್ಯಾ ಸೈನಿಕರು ದಾಳಿ ನಡೆಸುತ್ತಿದೆ. ಇತ್ತ ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಈಗಾಗಲೇ ಸರ್ಕಾರ, 4 ಕೇಂದ್ರ ಸಚಿವರನ್ನು ನಿಯೋಜಿಸಿ ಉಕ್ರೇನ್ ನೆರೆಯ ರಾಷ್ಟ್ರಗಳಿಗೆ ಕಳುಹಿಸಿದೆ. ಸಚಿವರು ಅಲ್ಲಿದ್ದುಕೊಂಡು ಆ ದೇಶದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿಕೊಡುವ ಜವಾಬ್ದಾರಿಯನ್ನು ನೀಡಲಾಗಿದೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾದ ಬುಕಾರೆಸ್ಟ್ ತಲುಪಿದ್ದು, ಇಂದು ಅಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಶೀಘ್ರವೇ ತಮ್ಮನ್ನು ತಾಯ್ನಾಡಿಗೆ ಕರೆದೊಯ್ಯಲಾಗುವುದು ಎಂದು ಧೈರ್ಯ ತುಂಬಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಂಧಿಯಾ, ಇಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ದಾಳಿಯಿಂದ ತತ್ತರಿಸಿರುವ ಜನರಿಗೆ ಧೈರ್ಯ ತುಂಬಲಾಗಿದೆ. ಇವರನ್ನು ತಕ್ಷಣವೇ ಇಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೂ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಹಂಗೇರಿಯಲ್ಲಿ, ಕಿರಣ್ ರಿಜಿಜು ಸ್ಲೋವಾಕಿಯಾದಲ್ಲಿ, ವಿಕೆ ಸಿಂಗ್ ಪೋಲೆಂಡ್ ನಲ್ಲಿ ಭಾರತೀಯರ ತೆರವು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ.










