ನವದೆಹಲಿ : ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಾತುಕತೆ ನಡೆಸಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಎರಡನೇ ಬಾರಿಗೆ ದೂರವಾಣಿ ಮೂಲಕ ಉಕ್ರೇನ್ ಅಧ್ಯಕ್ಷರ ಜೊತೆ ಮಾತನಾಡಿದ್ದಾರೆ. ಉಭಯ ನಾಯಕರು ಸುಮಾರು 35 ನಿಮಿಷಗಳ ಕಾಲ ಮತುಕತೆ ನಡೆಸಿದರು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ.
ಉಕ್ರೇನ್ ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಉಕ್ರೇನ್ ಸರ್ಕಾರ ನೀಡಿದ ಸಹಾಯಕ್ಕಾಗಿ ಪ್ರಧಾನಿ ಮೋದಿ ಅಧ್ಯಕ್ಷ ಝೆಲೆನ್ಸ್ಕಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ ಸುಮಿಯಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಉಕ್ರೇನ್ ಸರ್ಕಾರದಿಂದ ಪ್ರಧಾನಿ ನಿರಂತರ ಬೆಂಬಲವನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ.










