ಪಂಜಾಬ್ ಸಿಎಂ ಸ್ಥಾನಕ್ಕೆ ಚರಣ್‌ಜಿತ್ ಸಿಂಗ್ ಚನ್ನಿ ರಾಜೀನಾಮೆ…

66
firstsuddi

ಚಂಡೀಗಢ : ಪಂಜಾಬ್ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಚರಣ್‌ಜಿತ್ ಸಿಂಗ್ ಚನ್ನಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಚಂಡೀಗಢದ ರಾಜಭವನಕ್ಕೆ ಆಗಮಿಸಿದ ಚರಣ್‌ಜಿತ್ ಸಿಂಗ್ ಚನ್ನಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ರಾಜೀನಾಮೆ ಸಲ್ಲಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚನ್ನಿ, ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೂ ನನಗೆ ಸಂಪುಟದಲ್ಲಿ ಮುಂದುವರೆಯಲು ಹೇಳಿದ್ದಾರೆ. ನಾನು ಜನರ ಆದೇಶವನ್ನು ಸ್ವೀಕರಿಸುತ್ತೇನೆ ಎಂದರು.

ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎರಡು ಕ್ಷೇತ್ರಗಳಿಂದ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿಎಂ ಚನ್ನಿ ಎರಡೂ ಸ್ಥಾನಗಳಲ್ಲಿ ಸೋಲು ಕಂಡಿದ್ದಾರೆ. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷವು 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ 18 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಶಿರೋಮಣಿ ಅಕಾಲಿ ದಳ ಮೂರು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಮತ್ತು ಬಿಎಸ್ಪಿ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನವನ್ನು ಗೆದ್ದಿವೆ.