6 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ.. ಇಬ್ಬರನ್ನ ಒಂದು ಮಾಡಿದ್ದು ಆಧಾರ್ ಕಾರ್ಡ್.

56
firstsuddi

ಬೆಂಗಳೂರು : ಆರು ವರ್ಷಗಳ ಬಳಿಕ ಮಾತು ಬಾರದ ಮಗ, ಕೊನೆಗೂ ತಾಯಿ ಮಡಿಲು ಸೇರಿದ್ದಾನೆ. ತಾಯಿ ಮಗ ಒಂದು ಮಾಡಲು ಆಧಾರ್ ಕಾರ್ಡ್ ನೆರವಿಗೆ ಬಂದಿದೆ.

ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ನಿವಾಸಿ ಪಾವರ್ತಮ್ಮ ತರಕಾರಿ ವ್ಯಾಪಾರ ಮಾಡುತ್ತಾರೆ. 2016ರಲ್ಲಿ ತರಕಾರಿ ವ್ಯಾಪಾರಕ್ಕೆ ಮಗ ಭರತ್ ನನ್ನ ಕರೆದುಕೊಂಡು ಹೋಗಿದ್ದರು. ಈ ವೇಳೆ ತಿಂಡಿ ತರಲು ಹೋದ ಮಗ ವಾಪಸ್ ಬಂದಿಲ್ಲ. ಮಗನಿಗಾಗಿ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ, ಮಗ ಪತ್ತೆಯಾಗಿಲ್ಲ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ ಪಾರ್ವತಮ್ಮ, ಮಗ ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ ಎಂದು ಕಾಯುತ್ತಲೇ ಇದ್ದರು.

ಯಲಹಂಕದಿಂದ ತಪ್ಪಿಸಿಕೊಂಡ ಭರತ್ ಹತ್ತು ತಿಂಗಳ ಬಳಿಕ ಮಹಾರಾಷ್ಟ್ರದ ನಾಗ್ಪುರ ರೈಲ್ವೆ ನಿಲ್ದಾಣ ತಲುಪಿದ್ದಾನೆ. ಈ ವೇಳೆ ದಿಕ್ಕು ಕಾಣದೇ ಕಂಗೆಟ್ಟು ಓಡಾಡುತ್ತಿದ್ದ ಭರತ್ ನನ್ನು ಕಂಡು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ. ಭರತ್ ಗೆ ಆಧಾರ್ ಕಾರ್ಡ್ ಮಾಡಿಸಲು ಪುನರ್ ವಸತಿ ಕೇಂದ್ರದ ಅಧಿಕಾರಿಗಳು ನಿರ್ಧರಿಸಿ, 2022ರ ಜನವರಿಯಲ್ಲಿ ಸ್ಥಳೀಯ ಆಧಾರ್ ಸೇವಾ ಕೇಂದ್ರಕ್ಕೆ ಭರತ್ ನನ್ನು ಮಹೇಶ್ ಎಂಬುವವರು ಕರೆದೊಯ್ದಿದ್ದರು.

ಆದರೆ, ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಯಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಾಹಿತಿ ತಿಳಿದ ಕೂಡಲೇ ಮಹೇಶ್ ಭರತ್ ಪೋಷಕರ ವಿಳಾಸ ಪತ್ತೆಗೆ ನೆರವಾಗುವಂತೆ ವಿನಂತಿಸಿದ್ದರು. ಮಹೇಶ್ ಮನವಿಗೆ ಸ್ಪಂದಿಸಿದ ಆಧಾರ್ ಕೇಂದ್ರದ ಅಧಿಕಾರಿಗಳು, ಬಿ.ಭರತ್ ಕುಮಾರ್ ಹೆಸರಿನಲ್ಲಿದ್ದ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡೂ ಹೋಲಿಕೆಯಾಗಿತ್ತು. ಅಲ್ಲದೇ ಆಧಾರ್ ಮೂಲಕ ಭರತ್ ನ ತಾಯಿ ಪಾರ್ವತಮ್ಮ ಅವರ ಮೊಬೈಲ್ ನಂಬರ್ ಸಿಕ್ಕಿತ್ತು. ಪುನರ್ವಸತಿ ಕೇಂದ್ರದವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದರು.

ಕೊನೆಗೆ ನಾಗ್ಪುರ ಪುನರ್ವಸತಿ ಕೇಂದ್ರ ಅಧಿಕಾರಿಗಳು ಯಲಹಂಕ ಪೊಲೀಸರನ್ನು ಸಂಪರ್ಕಸಿ ಭರತ್ ತಾಯಿಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಯಲಹಂಕ ಠಾಣೆ ಇನ್ಸ್ ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಪಾರ್ವತಮ್ಮರವರನ್ನು ಪೊಲೀಸರ ಜೊತೆ ನಾಗ್ಪುರಕ್ಕೆ ಕಳುಹಿಸುವ ಮೂಲಕ ತಾಯಿ-ಮಗನನ್ನು ಒಂದು ಮಾಡಿದ್ದಾರೆ.