ಹಾವೇರಿ : ಮಾರ್ಚ್ 1 ರಂದು ಉಕ್ರೇನ್ ನಲ್ಲಿ ಮೃತಪಟ್ಟಿದ್ದ ನವೀನ್ ಮೃತದೇಹ 21 ದಿನಗಳ ಬಳಿಕ ಸ್ವಗ್ರಾಮ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮಕ್ಕೆ ತಲುಪಿದ್ದು, ನವೀನ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ವೀರಶೈವ ಸಂಪ್ರದಾಯದ ವಿಧಿವಿಧಾನದಂತೆ ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳನ್ನ ನೆರವೇರಿಸಿದರು. ಸುಮಾರು 3 ಗಂಟೆ ಕಾಲ ಸ್ವಗ್ರಾಮದಲ್ಲಿ ಮೆರವಣಿಗೆ ನಡೆಯಲಿದೆ. ಚಳಗೇರಿಯ ಪ್ರಮುಖ ರಸ್ತೆ, ಬೀದಿಗಳಲ್ಲಿ ಮೆರವಣಿಗೆ ನಡೆದ ನಂತರ ಮೃತದೇಹವನ್ನು ಎಸ್.ಎಸ್.ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಲಾಗುತ್ತದೆ. ಸಂಜೆ ಸುಮಾರು 4 ಗಂಟೆಗೆ ಎಸ್.ಎಸ್.ಕಾಲೇಜಿಗೆ ಪಾರ್ಥಿವ ಶರೀರ ತಲುಪಬಹುದು.
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನವೀನ್ ಮೃತದೇಹದ ಅಂತಿಮ ದರ್ಶನ ಪಡೆಯಲಿದ್ದು ಈಗಾಗಲೇ ಹಾವೇರಿಯತ್ತ ಪ್ರಯಾಣ ಬೆಳೆಸಿದ್ದಾರೆ. ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ನಲ್ಲಿ ದಾವಣಗೆರೆಗೆ ತೆರಳಿ, ದಾವಣಗೆರೆಯಿಂದ ಚಳಗೇರಿಗೆ ತೆರಳಲಿದ್ದಾರೆ.










