ಕೆಲಸ ಮುಗಿಸಿ ಪ್ರತಿದಿನ 10 ಕಿಮೀ ಓಡಿಯೇ ಮನೆ ಸೇರುವ ಯುವಕ – ಕಾರಣ ಏನು ಗೊತ್ತಾ?

64
firstsuddi

ನೋಯ್ಡಾ(ಉತ್ತರಪ್ರದೇಶ): ಯುವಕನೊಬ್ಬ ಮಧ್ಯರಾತ್ರಿ ನೊಯ್ಡಾದ ರಸ್ತೆಯಲ್ಲಿ ಓಡುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಯುವಕ ರಾತ್ರಿ ಕೆಲಸ ಮುಗಿಸಿ ವಾಪಸ್ ಮನೆಗೆ ಹೋಗುವಾಗ ಹೀಗೆ ಓಡಿಕೊಂಡೇ ಹೋಗುತ್ತಾನಂತೆ. ಅದಕ್ಕೆ ಒಂದು ಕಾರಣವೂ ಇದೆ. ಹುಡುಗ ಓಡುತ್ತ ಹೋಗುವ ವಿಡಿಯೋವನ್ನು ಸಿನಿಮಾ ನಿರ್ಮಾಪಕ, ಲೇಖಕ ವಿನೋದ್ ಕಪ್ರಿ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಈ ಯುವಕನ ಹೆಸರು ಪ್ರದೀಪ್ ಮೆಹ್ರಾ. ಮೂಲತಃ ಉತ್ತರಾಖಂಡದವನಾದ ಪ್ರದೀಪ್ ಮೆಹ್ರಾ ನೋಯ್ಡಾದಲ್ಲಿ ಮೆಕ್ ಡೋನಾಲ್ಡ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋಮೀಟರ್ ಓಡುತ್ತಲೇ ಬರೋಲಾದಲ್ಲಿರುವ ಮನೆ ಸೇರುತ್ತಾರೆ. ಇದಕ್ಕೆ ಕಾರಣ ಆತ ಭಾರತೀಯ ಸೇನೆಗೆ ಸೇರಬೇಕೆಂಬ ಹಂಬಲ ಹೊಂದಿದ್ದಾನಂತೆ.

ವೀಡಿಯೋದಲ್ಲಿ ಏನಿದೆ?: ಪ್ರದೀಪ್ ಮೆಹ್ರಾ ರಸ್ತೆಯಲ್ಲಿ ಓಡುತ್ತಿರುತ್ತಾನೆ. ತನ್ನನ್ನೊಂದು ಕಾರು ಹಿಂಬಾಲಿಸುತ್ತಿದೆ ಎಂಬುದನ್ನು ನೋಡುವುದಿಲ್ಲ. ಒಂದೇ ಸಮ ಓಡುತ್ತಲೇ ಹೋಗುತ್ತಿರುತ್ತಾರೆ. ವಿನೋದ್ ಕಪ್ರಿ ಹುಡುಗನಿಗೆ ಸಮಾನಾಂತರವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿ, ಬಾ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದರೆ ಬೇಡ, ನಾನು ಓಡಬೇಕು ಎನ್ನುತ್ತಾರೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಆಗ ವಿನೋದ್ ಕಪ್ರಿ, ಯಾಕೆ ಓಡಬೇಕು ಹೀಗೆ ಎಂದು ಕೇಳಿದಾಗ, ನಾನು ಸೇನೆಯನ್ನು ಸೇರಬೇಕು. ನನಗೆ ಬೆಳಗ್ಗೆ ಓಡಲು ಸಮಯ ಸಿಗುವುದಿಲ್ಲ. ಹೀಗಾಗಿ ಕೆಲಸ ಮುಗಿಸಿ ಮಧ್ಯರಾತ್ರಿ ಓಡಿಯೇ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.