ಲಕ್ನೋ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಇಂದು ತಮ್ಮ ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಸತ್ತಿನಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿಗೆ ಭೇಟಿ ನೀಡಿದ ಅಖಿಲೇಶ್ ಯಾದವ್ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಸಂಸತ್ತನ್ನು ತೊರೆಯುವ ಅವರ ಕ್ರಮವು ಅವರು 2027 ರ ಯುಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯುಪಿ ವಿಧಾನಸಭೆಯಲ್ಲಿ ಬಿಜೆಪಿಯನ್ನು ಎದುರಿಸಲು ಯೋಜಿಸುತ್ತಿದ್ದಾರೆ ಎಂದು ಸೂಚಿಸುತ್ತದೆ.
ಅಖಿಲೇಶ್ ಯಾದವ್ ಅವರು ಪೂರ್ವ ಉತ್ತರ ಪ್ರದೇಶದ ಅಜಂಗಢದಿಂದ ಸಂಸದರಾಗಿದ್ದರು. ಆದರೆ ಇತ್ತೀಚೆಗೆ ಮಾರ್ಚ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅಖಿಲೇಶ್ ಯಾದವ್ ಅವರು ತಮ್ಮ ಕುಟುಂಬದ ಭದ್ರಕೋಟೆಯಾದ ಕರ್ಹಾಲ್‌ನಿಂದ ಸ್ಪರ್ಧಿಸಿದ್ದರು. ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಭಾರೀ ಅಂತರದಿಂದ ಗೆದ್ದಿರುವ ಅಖಿಲೇಶ್ ಯಾದವ್ ಶಾಸಕರಾಗಿ ಮುಂದುವರಿಯಲಿದ್ದಾರೆ.
ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಪಕ್ಷವು ಬಿಜೆಪಿಗೆ ನೇರ ಎದುರಾಳಿಯಾಗಿತ್ತು. ಉತ್ತರ ಪ್ರದೇಶದ 403 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನವನ್ನು ಗಳಿಸಿತು. ಬಿಜೆಪಿ 255 ಸ್ಥಾನಗಳನ್ನು ಗಳಿಸಿ ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದೆ.










