ಉಮರ್​ ಖಾಲಿದ್​ಗೆ ಜಾಮೀನು ನಿರಾಕರಿಸಿದ ದೆಹಲಿ ಕೋರ್ಟ್…

104
firstsuddi

ನವದೆಹಲಿ : 2020ರ ಫೆಬ್ರವರಿ 20 ರಂದು ದೆಹಲಿಯಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಪಿತೂರಿ ಆರೋಪಿ ಉಮರ್ ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಲಯ ತಿರಸ್ಕರಿಸಿದೆ.

ಉಮರ್ ಖಾಲಿದ್ ಫೆಬ್ರವರಿ 2020ರ ಗಲಭೆಯ ‘ಮಾಸ್ಟರ್‌ಮೈಂಡ್‌’ ಎಂದು ಆರೋಪಿಸಲಾಗಿದೆ. ಖಾಲಿದ್ ವಿರುದ್ಧ ಭಯೋತ್ಪಾದನಾ-ವಿರೋಧಿ ಕಾನೂನು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಂಧನ ಬಳಿಕ ಖಾಲಿದ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ನ್ಯಾಯಾಲಯ ಖಾಲಿದ್ ಗೆ ಜಾಮೀನು ನಿರಾಕರಿಸಿದೆ.

ಖಾಲಿದ್ ಪರ ವಾದ ಮಂಡಿಸಿದ್ದ ವಕೀಲ ತ್ರಿದೀಪ್ ಪೈಸ್, ಇದೊಂದು ಉದ್ದೇಶಪೂರ್ವಕವಾಗಿ ದಾಖಲಿಸಿದ ಪ್ರಕರಣವಾಗಿದೆ. ಪೊಲೀಸರು ಕಟ್ಟುಕಥೆಯೊಂದನ್ನು ಕಟ್ಟಿದ್ದಾರೆ. ಖಾಲಿದ್ ವಿರುದ್ಧದ ಸಾಕ್ಷಿ ಹೇಳಿಕೆಗಳು ಅಸಮಂಜಸವಾಗಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್, ದೆಹಲಿ ಗಲಭೆಯು ಆರೋಪಿಗಳು ರೂಪಿಸಿದ ಪೂರ್ವಯೋಜಿತ ಆಳವಾದ ಸಂಚಿನ ಭಾಗವಾಗಿದೆ ಎಂದು ವಾದಿಸಿದರು.

ಉಮರ್ ಖಾಲಿದ್ ಜೆಎನ್​ಯುನ ಮಾಜಿ ವಿದ್ಯಾರ್ಥಿಯಾಗಿದ್ದಾರೆ. ಅವರನ್ನು 2020ರ ಸೆಪ್ಟೆಂಬರ್ 14ರಂದು ಬಂಧಿಸಲಾಗಿತ್ತು. ಪ್ರಸ್ತುತ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಖಾಲಿದ್ ಜುಲೈ 2021 ರಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಪ್ರಕರಣದ ವಾದವನ್ನು ಆಲಿಸಿದ ನಂತರ ಮಾರ್ಚ್ 3 ರಂದು ಆದೇಶವನ್ನು ಕಾಯ್ದಿರಿಸಿದ್ದರು.