ಮೈಸೂರು : ಮಾಜಿ ಮುಖ್ಯಮಮತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಗ್ರಾಮಸ್ಥರು ಮತ್ತು ಗ್ರಾಮದ ಹಳೇ ಸ್ನೇಹಿತರ ಜೊತೆ ಸುಮಾರು 40 ನಿಮಿಷಗಳ ಕಾಲ ಜಾನಪದ ವಾದ್ಯಗಳ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.
ಉಪಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನೃತ್ಯ ಮಾಡಿದ್ದ ಸಿದ್ದರಾಮಯ್ಯ ಈಗ 15 ವರ್ಷದ ಬಳಿಕ ಗ್ರಾಮದ ಜಾತ್ರೆಯಲ್ಲಿ ಕುಣಿದಿದ್ದಾರೆ. ತಮ್ಮ ನೆಚ್ಚಿನ ನಾಯಕರ ಕುಣಿತ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ನೂಕು ನುಗ್ಗಲು ನಡುವೆಯೇ ಸಿದ್ದರಾಮಯ್ಯ ಅವರ ಬಿಂದಾಸ್ ಕುಣಿತವನ್ನು ಗ್ರಾಮಸ್ಥರು ವೀಕ್ಷಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಇದೇ ಊರಿನವನು. ನಮ್ಮೂರಿನ ಜಾತ್ರೆಗೆ ನಾನು ಯಾವಾಗಲೂ ತಪ್ಪಿಸಿಲ್ಲ. ಸಚಿವನಾಗಿದ್ದಾಗಲೂ ಬಂದಿದ್ದೆ. ಮುಖ್ಯಮಂತ್ರಿ ಆಗಿದ್ದಾಗಲೂ ಬಂದಿದ್ದೆ. ಈಗಲೂ ಬಂದಿದ್ದೇನೆ. ಕೋವಿಡ್ ಕಾರಣ ಕಳೆದ ವರ್ಷ ಜಾತ್ರೆ ಮಾಡಿರಲಿಲ್ಲ. ಇದೀಗ ಸಂಭ್ರಮದಿಂದ ಜಾತ್ರೆ ಜರುಗುತ್ತಿದ್ದು, ಇಲ್ಲಿಗೆ ಬಂದು ಹೋಗೋದೆ ಖುಷಿ ಎಂದರು.










