ಮಾನನಷ್ಟ ಮೊಕದ್ದಮೆಗೆ ಹೆದರುವುದಿಲ್ಲ : ಅಣ್ಣಾಮಲೈ.

79
firstsuddi

ಚೆನ್ನೈ: ಮಾನನಷ್ಟ ಮೊಕದ್ದಮೆಗೆ ಹೆದರುವುದಿಲ್ಲ. ನ್ಯಾಯಾಲಯದಲ್ಲಿ ಎದುರಿಸಲು ಸಿದ್ಧನಿದ್ದೇನೆ ಎಂದು ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಡಿಎಂಕೆ ವಿರುದ್ಧ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಿಡಿಕಾರಿದ್ದಾರೆ.

ಅಧಿಕಾರದಲ್ಲಿರುವ ಪಕ್ಷ ನಾವು ಕೇಳುವ ಪ್ರಶ್ನೆಗಳನ್ನ ಎದುರಿಸಲು ಸಿದ್ಧವಿಲ್ಲದ ಸಂದರ್ಭದಲ್ಲಿ ಮಾನನಷ್ಟ ಮೊಕದ್ದಮೆ ಹಾಕುತ್ತಾರೆ. ಡಿಎಂಕೆ ಪಕ್ಷದ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಸೇರಿ ಇಲ್ಲಿಯವರೆಗೆ ನನ್ನ ವಿರುದ್ಧ 610 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಾಗಿವೆ. ಬಿಜೆಪಿಯನ್ನು ಎದುರಿಸಲು ಡಿಎಂಕೆ ಹೆದರುತ್ತಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿರುವ ಆರೋಪದಡಿ ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಈಗಾಗಲೇ ಡಿಎಂಕೆ ಪಕ್ಷದಿಂದ ನೋಟಿಸ್ ಸಹ ಜಾರಿಯಾಗಿದೆ.

ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರು ನೋಟಿಸ್ ಜಾರಿ ಮಾಡಿದ್ದು, ಅಣ್ಣಾಮಲೈ ಅವರು ತಾವು ನೀಡಿರುವ ಹೇಳಿಕೆಗಳನ್ನು ವಾಪಸ್ ಪಡೆದು 24 ಗಂಟೆಗಳ ಒಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಎರಡು ದಿನಗಳೊಳಗಾಗಿ ಮುಖ್ಯಮಂತ್ರಿ ಅವರ ಸಾರ್ವಜನಿಕ ಪರಿಹಾರ ನಿಧಿಗೆ 100 ಕೋಟಿ ಪಾವತಿಸುವಂತೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.