ಕರ್ನಾಟಕದಲ್ಲೂ ಕಡ್ಡಾಯ ಮಾಸ್ಕ್ ನಿಯಮ ಕೈ ಬಿಡುವ ವಿಚಾರ – ಆರೋಗ್ಯ ಸಚಿವರು ಹೇಳಿದ್ದೇನು?

72
firstsuddi

ಬೆಂಗಳೂರು : ಈಗಾಗಲೇ ದೆಹಲಿ ಸೇರಿದಂತೆ 3-4 ರಾಜ್ಯಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಕರ್ನಾಟಕದಲ್ಲೂ ಚರ್ಚೆ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಕೆ. ಸುಧಾಕರ್ ಅವರು, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ನಿಯಮ ಸಡಿಲ ವಿಚಾರವಾಗಿ ಸಿಎಂ ಬೊಮ್ಮಾಯಿ ಹಾಗೂ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸುತ್ತೇನೆ ಎಂದರು.

ನಮ್ಮಲ್ಲಿ ಶೇ.90ರಷ್ಟು ಜನ ಮಾಸ್ಕ್ ಧರಿಸುತ್ತಿಲ್ಲ. ಈ ಬಗ್ಗೆ ನಾವು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಮಾಸ್ಕ್ ರದ್ದತಿ ಮಾಡುವ ಬಗ್ಗೆ ನಾವೇನೂ ಆದೇಶ ಮಾಡಿಲ್ಲ. ಇನ್ನು ಅನೇಕ ದೇಶಗಳಲ್ಲಿ 4ನೇ ಅಲೆ ಬಂದಿದೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇದ್ದೇವೆ. ಶೀಘ್ರವೇ ತಾಂತ್ರಿಕ ಸಲಹಾ ಸಮಿತಿ, ಸಿಎಂ ಜೊತೆ ಚರ್ಚೆ ಮಾಡಿ ಮಾಸ್ಕ್ ನಿಯಮದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಇನ್ನು ಒಮಿಕ್ರಾನ್ ಹೊಸತಳಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಈಗಾಗಲೇ ವಿದೇಶದಿಂದ ಆಗಮಿಸುತ್ತಿರುವವರಲ್ಲಿ ಸೋಂಕು ಏನಾದರೂ ಕಂಡು ಬಂದರೆ ಅಂತಹವರನ್ನು ಪರೀಕ್ಷಿಸಲು ಜಿನೋಮಿಕ್ ಸ್ವೀಕ್ವೆನ್ಸ್ ಟೆಸ್ಟ್ ಗೂ ಕಳುಹಿಸಲಾಗುತ್ತಿದೆ.ಹೊಸ ತಳಿ ಪತ್ತೆ ಕುರಿತು ಐಸಿಎಂಆರ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.