ನವದೆಹಲಿ: ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರನ್ನು ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ, ಮೋಸ್ಟ್ ವಾಂಟೆಡ್ ಉಗ್ರ ಅಯ್ಮಾನ್ ಅಲ್ ಜವಾಹಿರಿ ಹಾಡಿ ಹೊಗಳಿದ್ದಾರೆ. ಒಂಬತ್ತು ನಿಮಿಷಗಳ ವೀಡಿಯೊವನ್ನು ಬಿಡುಗಡೆ ಮಾಡಿರುವ ಜವಾಹಿರಿ, ಮುಸ್ಕಾನ್ ಖಾನ್ ಅಲ್ಲಾಹು ಅಕ್ಬರ್ ಎಂದು ಕೂಗುವ ಮೂಲಕ ಅವರ ಜೈ ಶ್ರೀರಾಮ್ ಘೋಷಣೆಯನ್ನು ವಿರೋಧಿಸಿದ್ದಾಳೆ ಎಂದು ಶ್ಲಾಘಿಸಿದ್ದಾನೆ.
ದಿ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಬರೆಯಲಾದ ಪೋಸ್ಟರ್ ನ ಶೀರ್ಷಿಕೆಯಿರುವ ವೀಡಿಯೋದಲ್ಲಿ ಮುಸ್ಕಾನ್ ನನ್ನು ಹೊಗಳಿ ರಚಿಸಿದ ಕವನವನ್ನು ಓದಿದ್ದಾನೆ. ಈ ಕವಿತೆಯಲ್ಲಿ ಮುಸ್ಕಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವೀಡಿಯೋಗಳನ್ನು ನೋಡುವ ಮೂಲಕ ತಿಳಿದುಕೊಂಡಿದ್ದೇನೆ. ಈ ಸಹೋದರಿ ತಕ್ಬೀರ್ ಧ್ವನಿಯನ್ನು ಎತ್ತುವ ಮೂಲಕ ನನ್ನ ಹೃದಯವನ್ನು ಗೆದ್ದಿದ್ದಾಳೆ ಎಂದು ಉಗ್ರ ಹೇಳಿದ್ದಾನೆ.
ಅಯ್ಮಾನ್ ಅಲ್ ಜವಾಹಿರಿ ಮೋಸ್ಟ್ ವಾಂಟೆಡ್ ಜಿಹಾದಿ ಭಯೋತ್ಪಾದಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಈತ 2020ರಲ್ಲಿ ಸಹಜವಾಗಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿತ್ತು.










