ಕೇವಲ 12 ಸಾವಿರಕ್ಕಾಗಿ ಸ್ವಂತ ಮಗನ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!

101
firstsuddi

ಬೆಂಗಳೂರು : ಕೇವಲ 12 ಸಾವಿರ ರೂಪಾಯಿ ಹಣ ಕಳೆದುಕೊಂಡಿರುವುದಕ್ಕೆ ಸ್ವಂತ ಮಗನ ಮೇಲೆಯೇ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಘಟನೆ ನಗರದ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆಜಾದ್ ನಗರದ ನಿವಾಸಿ ಸುರೇಂದ್ರ ಎಂಬವರು ತಮ್ಮ ಮಗ ಅರ್ಪಿತ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕಳೆದ ವಾರ ಅರ್ಪಿತ್ 12 ಸಾವಿರ ರೂ. ಕಳೆದುಕೊಂಡಿದ್ದರು. ಇದರಿಂದ ಕೋಪಗೊಂಡ ಸುರೇಂದ್ರ ಅವರು ಅರ್ಪಿತ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅರ್ಪಿತ್ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ದೇಹದ ಬಹುಪಾಲು ಭಾಗ ಸುಟ್ಟುಹೋಗಿತ್ತು.

ಬಳಿಕ ಸ್ಥಳೀಯರು ಬೆಂಕಿ ನಂದಿಸಿ ಅರ್ಪಿತ್ ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿಟ್ಟು ಅರ್ಪಿತ್ ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಅರ್ಪಿತ್ ಇಂದು ಸಾವನ್ನಪ್ಪಿದ್ದಾರೆ. ಅಮಾನವೀಯ ಘಟನೆಯ ದೃಶ್ಯವು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಆರೋಪಿಯನ್ನು ಚಾಮರಾಜಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.