ಉಡುಪಿ : ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಘುಪತಿ ಭಟ್ ಅವರು, ನಾಳೆಯೂ ಡ್ರಾಮಾ ಮುಂದುವರಿದರೆ ಕ್ರಿಮಿನಲ್ ಕೇಸ್, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಾಲ್ ಟಿಕೆಟ್ ಪಡೆಯಲು ನಿನ್ನೆ ಸಂಜೆಯವರೆಗೆ ಅವಕಾಶ ಕೊಡಲಾಗಿತ್ತು. ಕಾಲೇಜಿನಿಂದ ಫೋನ್ ಮಾಡಿ ಅವರಿಗೆ ಹಾಲ್ ಟಿಕೆಟ್ ಬಗ್ಗೆ ಹೇಳಲಾಗಿತ್ತು. ಬೆಳಗ್ಗೆ 9.30ರ ನಂತರ ಹಾಲ್ ಟಿಕೆಟ್ ಗೆ ಕಾಲೇಜಿಗೆ ಬಂದಿದ್ದಾರೆ. ಹಿಜಾಬ್ ತೆಗೆದು ಪರೀಕ್ಷೆ ಬರೆಯುವುದಾಗಿ ಒಪ್ಪಿದ್ದಾರೆ. ಆದರೆ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ಡ್ರಾಮಾ ಮಾಡಿದ್ದಾರೆ.
ಇದೇ ರೀತಿ ನಾಳೆಯೂ ಡ್ರಾಮಾ ಮುಂದುವರಿದರೆ ಕ್ರಿಮಿನಲ್ ಕೇಸ್, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ. ಈ ಕುರಿತು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ಪರೀಕ್ಷಾ ಕೇಂದ್ರದಲ್ಲಿ ಹುಡುಗಾಟಿಕೆ ಮಾಡುವಂತಿಲ್ಲ. ಈ ಮಕ್ಕಳನ್ನು ನಾವು ಇನ್ನು ಮುಂದೆ ಲಘುವಾಗಿ ಪರಿಗಣಿಸುವುದಿಲ್ಲ. ಇವರ ನಡವಳಿಕೆ ನೋಡಿದರೆ ಪರೀಕ್ಷೆ ಬರೆಯುವ ರೀತಿ ಇಲ್ಲ. ಇವರು ಡ್ರಾಮಾ ಕ್ರಿಯೇಟ್ ಮಾಡಲು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಅಶಿಸ್ತಿನ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ವಾತಾವರಣ ಹಾಳುಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವುದು ಇವರ ಉದ್ದೇಶ ಎಂದು ಕಿಡಿಕಾರಿದರು.










