ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ – ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಬಂಧನ…

69
firstsuddi

ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡನೊಬ್ಬನನ್ನು ಸಿಐಡಿ ಬಂಧಿಸಿದೆ.

ಬ್ಲೂಟೂತ್ ಡಿವೈಸ್ ಬಳಕೆ ಮಾಡಿ ಪರೀಕ್ಷೆ ಬರೆಸುವಲ್ಲಿ ಅಕ್ರಮ ಎಸಗಿದ್ದ ಆರೋಪದ ಹಿನ್ನಲೆಯಲ್ಲಿ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಎಂಬಾತನನ್ನು ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಬಂಧಿಸಲಾಗಿದೆ.

ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ನಾಳೆ 101 ಸಾಮೂಹಿಕ ವಿವಾಹವನ್ನು ಮಹಾಂತೇಶ್ ಪಾಟೀಲ್ ಹಾಗೂ ಆತನ ಸಹೋದರ ಆರ್.ಡಿ.ಪಾಟೀಲ್ ಏರ್ಪಡಿಸಿದ್ದರು. ಇಂದು ಅಲ್ಲಿಗೆ ತೆರಳಿದ ಸಿಐಡಿ ತಂಡ ಆರೋಪಿಯನ್ನು ಬಂಧಿಸಿದೆ.

ಬಂಧನಕ್ಕೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳಿಗೆ, ‘ನಮ್ಮ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಹುಷಾರ್’ ಎಂದು ಮಹಾಂತೇಶ್ ಪಾಟೀಲ್ ಆವಾಜ್ ಹಾಕಿದ್ದರಂತೆ. ಇದರಿಂದ ಕೋಪಗೊಂಡ ಸಿಐಡಿ ಡಿವೈಎಸ್ಪಿ ಶಂಕರಗೌಡ, ಆರೋಪಿ ಮಹಾಂತೇಶ್ ಪಾಟೀಲ್ ಕೊರಳಪಟ್ಟಿ ಹಿಡಿದು ಎಳೆದುಕೊಂಡು ಹೋಗಿದ್ದಾರೆ.